ಹಕ್ಕು ವರ್ಗಾವಣೆ ಆಗದಿದ್ದರೆ, ಬಿ ಖರಾಬ್ ಭೂಮಿ ಸಾರ್ವಜನಿಕ ಬಳಕೆಗೆ ಲಭ್ಯ: ಹೈಕೋರ್ಟ್
ಹಕ್ಕು ವರ್ಗಾವಣೆ ಆಗದಿದ್ದರೆ, ಬಿ ಖರಾಬ್ ಭೂಮಿ ಸಾರ್ವಜನಿಕ ಬಳಕೆಗೆ ಲಭ್ಯ: ಹೈಕೋರ್ಟ್
ಭೂಸ್ವಾಧೀನ ಕಾಯ್ದೆಯಡಿ ಭೂಮಿ ಸ್ವಾಧೀನಪಡಿಸಿದ "ಬಿ ಖರಾಬ್" ಭೂಮಿಯಲ್ಲಿ ಸಾರ್ವಜನಿಕರ ಹಕ್ಕನ್ನು ರದ್ದುಪಡಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ತುಮಕೂರು ಜಿಲ್ಲೆಯ ಗುಬ್ಬಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(APMC) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ರಸ್ತೆಗಳು ಎಂಬ ವ್ಯಾಖ್ಯೆಯಲ್ಲಿ ಕಾಲುದಾರಿ, ಬಂಡಿಜಾಡು ಸಹಿತ ಪಾದಚಾರಿ ಮತ್ತು ಗಾಡಿಗಳ ದಾರಿಗಳೂ ಸೇರಿರುತ್ತವೆ ಎಂದು ಅಭಿಪ್ರಾಯಪಟ್ಟಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 67 ಪ್ರಕಾರ, ಸಾರ್ವಜನಿಕ ರಸ್ತೆ, ಬೀದಿ, ಓಣಿ, ಪಥ, ಸೇತುವೆ, ಕಂದಕ, ತಡೆಗೋಡೆ ಮತ್ತು ಬೇಲಿಗಳು ಸರ್ಕಾರಕ್ಕೆ ಸೇರಿವೆ. ಕಾಲು ದಾರಿ ಮತ್ತು ಬಂಡಿ ಜಾಡು ಎಂಬ ಗಾಡಿಜಾಡು ಹಿಂದಿನ ರಸ್ತೆಗಳಾಗಿದ್ದು, ಈ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ವಾಸಿಸುವ ಜನರು ವಿವಿಧ ಪ್ರದೇಶಗಳಿಗೆ ಓಡಾಡಲು ಈ ಸಂಪರ್ಕ ದಾರಿಯನ್ನು ಬಳಸುತ್ತಿದ್ದರು.
ಈ ಜಾಗವನ್ನು ಗ್ರಾಮದ ನಕ್ಷೆಯಲ್ಲಿ ಮತ್ತು ಕಂದಾಯ ದಾಖಲೆಗಳಲ್ಲಿ ಗುರುತಿಸಲಾಗಿರುತ್ತದೆ. ಈ ಭೂಮಿಯನ್ನು ಬಿ ಖರಾಬ್ ಭೂಮಿ ಎಂದು ವರ್ಗೀಕರಿಸಲಾಗಿರುತ್ತದೆ. ಈ ಪ್ರದೇಶ ಸರ್ಕಾರಕ್ಕೆ ಸೇರಿದ್ದರೂ, ಸಾರ್ವಜನಿಕರ ಬಳಕೆಗೆ ಇದನ್ನು ಮೀಸಲಿಡಲಾಗಿರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿವರ:
1999-2000ರ ಅವಧಿಯಲ್ಲಿ ಎಪಿಎಂಸಿಯ ಅನುಕೂಲಕ್ಕಾಗಿ ಕೆಲವು ಭೂಮಿಯನ್ನು ಸ್ವಾಧೀನಪಡಿಸಿ ಉಪ ಮಾರುಕಟ್ಟೆಗಾಗಿ ಬಡಾವಣೆ ರಚಿಸಿ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಆ ಬಳಿಕ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರ ನಡೆಸಲು ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು.
ಆದರೆ, 2019ರಲ್ಲಿ ಕಾಲುದಾರಿಯನ್ನು ಮುಚ್ಚಿರುವ ಸಂಬಂಧ ತಹಶೀಲ್ದಾರ್ ಅವರು ಎಪಿಎಂಸಿಗೆ ನೋಟೀಸ್ ಜಾರಿ ಮಾಡಿದ್ದರು.
ಇದಕ್ಕೆ ಉತ್ತರ ನೀಡಿದ್ದ ಎಪಿಎಂಸಿ, ಇಡೀ ಆಸ್ತಿ ಎಪಿಎಂಸಿಗೆ ಸೇರಿದ್ದಾಗಿದೆ. ಈ ಜಮೀನಿನಲ್ಲಿ ಯಾವುದೇ ಕಾಲು ದಾರಿ ಇಲ್ಲ. ಭೂಮಿಯನ್ನು ಸ್ವಾಧೀನಪಡಿಸಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿತ್ತು.
ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಕೇವಲ 10-15 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಹಂಚಿಕೆ ಮಾಡಲಾಗಿದೆ. ಪಕ್ಕದ ಬಿ ಖರಾಬ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿಲ್ಲ. ಅರ್ಜಿದಾರರಿಗೆ ವರ್ಗಾವಣೆಯೂ ಆಗಿಲ್ಲ. ಹಾಗಾಗಿ, ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 67 ಪ್ರಕಾರ, ಸಾರ್ವಜನಿಕರ ಹಕ್ಕನ್ನು ಕಸಿದುಕೊಳ್ಳಲಾಗಿಲ್ಲ. ಆದ್ದರಿಂದ ಸಾರ್ವಜನಿಕರು ಈ ಪ್ರದೇಶದ ಕಾಲುದಾರಿಯನ್ನು ಬಳಸಲು ಅರ್ಹರಾಗಿರುತ್ತಾರೆ ಎಂದು ವಾದಿಸಿದ್ದರು.
ಪ್ರಕರಣ: ಎಪಿಎಂಸಿ Vs ಇ.ಒ. ತಾಲೂಕು ಪಂಚಾಯತ್ ಮತ್ತಿತರರು
ಹೈಕೋರ್ಟ್, WP 13483/2022 Dated 12-12-2023