ಸರಕಾರಿ ನೌಕರರ ಸಂಘದಲ್ಲಿ ಅವ್ಯವಹಾರ: ಪದಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೋರ್ಟ್ ಆದೇಶ
ಸರಕಾರಿ ನೌಕರರ ಸಂಘದಲ್ಲಿ ಅವ್ಯವಹಾರ: ಪದಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೋರ್ಟ್ ಆದೇಶ
ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದಲ್ಲಿ ಆರ್ಥಿಕ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಪದಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ನ್ಯಾಯಾಲಯದ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಪದಾಧಿಕಾರಿಗಳ ಚುನಾವಣೆಯು ದಿನಾಂಕ 3.8.2019 ರಂದು ಜರಗಿದ್ದು ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ದಾವೆಯ ತೀರ್ಮಾನಕ್ಕೆ ಒಳಪಟ್ಟು ನೂತನ ಆಡಳಿತ ಮಂಡಳಿಯು ಅಸ್ತಿತ್ವಕ್ಕೆ ಬಂದಿತ್ತು.
ಸದರಿ ಆಡಳಿತ ಮಂಡಳಿಯು ಕಳೆದ 5 ವರ್ಷಗಳ ಅವಧಿಯಲ್ಲಿ ಪ್ರತಿವರ್ಷ ನಡೆಸಬೇಕಾದ ಮಹಾಸಭೆಯನ್ನು ನಡೆಸಿಲ್ಲ. ಬೈಲಾ ನಿಯಮಾವಳಿಯ ಪ್ರಕಾರ ಕ್ಲಪ್ತ ಕಾಲದಲ್ಲಿ ಕಾರ್ಯಕಾರಿ ಸಮಿತಿಯ ಸಭೆ ನಡೆಸಿಲ್ಲ. ಸಂಘದ ಲೆಕ್ಕಪತ್ರಗಳು ಪಾರದರ್ಶಕವಾಗಿಲ್ಲ. ಆರ್ಥಿಕ ಅವ್ಯವಹಾರ ನಡೆಸಿದೆ ಎಂಬಿತ್ಯಾದಿ ವಿಷಯಗಳು ಸಂಘದ ಪದಾಧಿಕಾರಿಗಳ ಚುನಾವಣೆಯನ್ನು ಅಸಿಂದು ಎಂದು ಘೋಷಿಸಿ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯವು ದಿನಾಂಕ 24.8.2022 ರಂದು ನೀಡಿದ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಮಂಗಳೂರಿನ ಎರಡನೇ ಹೆಚ್ಚುವರಿ ಸಿವಿಲ್ ಹಿರಿಯ ಸಿವಿಲ್ ನ್ಯಾಯಾಲಯದ ಅವಗಾಹನೆಗೆ ಬಂದಿದ್ದು ಆರ್ಥಿಕ ಅವ್ಯವಹಾರ ನಡೆಸಿ ಸಂಘದ ನಿಧಿಯನ್ನು ದುರುಪಯೋಗಪಡಿಸಿದ ಪದಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಕ್ಕೆ ಮಾನ್ಯ ಮೇಲ್ಮನವಿ ನ್ಯಾಯಾಲಯವು ದಿನಾಂಕ 17.11.2023 ರಂದು ನೀಡಿದ ತೀರ್ಪಿನಲ್ಲಿ ಆದೇಶಿಸಿದೆ.
ಮಾನ್ಯ ನ್ಯಾಯಾಲಯದ ತೀರ್ಪಿನ ಪ್ರಕಾರ ಪದಾಧಿಕಾರಿಗಳ ಚುನಾವಣೆಯು ಅಸಿಂಧು ಎಂದು ಘೋಷಿಸಲ್ಪಟ್ಟಿರುವುದರಿಂದ ಕೂಡಲೇ ಆಡಳಿತ ಮಂಡಳಿಯನ್ನು ಬರ್ಕಾಸ್ತುಗೊಳಿಸಿ ಆಡಳಿತ ಅಧಿಕಾರಿಯನ್ನು ನೇಮಕ ಮಾಡುವುದು ಸಕ್ಷಮ ಪ್ರಾಧಿಕಾರದ ಕರ್ತವ್ಯವಾಗಿತ್ತು. ಆದರೆ ಸಕ್ಷಮ ಪ್ರಾಧಿಕಾರವು ಇದುವರೆಗೂ ಸಂಘಕ್ಕೆ ಆಡಳಿತ ಅಧಿಕಾರಿಯನ್ನು ನೇಮಿಸಿಲ್ಲ.
ಮಾನ್ಯ ನ್ಯಾಯಾಲಯದ ತೀರ್ಪು ಘೋಷಿಸಲ್ಪಟ್ಟು ಒಂದು ತಿಂಗಳ ಅವಧಿ ಕಳೆದರೂ ಅನರ್ಹಗೊಂಡ ಪದಾಧಿಕಾರಿಗಳು ಅಕ್ರಮವಾಗಿ ಅಧಿಕಾರವನ್ನು ಅನುಭವಿಸುತ್ತಿದ್ದು ಸಂಘದ ನಿಧಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ತಮಗೆ ಯಾವುದೇ ಅಧಿಕಾರ ಇಲ್ಲದಿದ್ದರೂ ಸಂಘದ ಸಭಾಭವನವನ್ನು ಅಕ್ರಮವಾಗಿ ಬಾಡಿಗೆಗೆ ನೀಡುವುದು, ಅನವಶ್ಯಕ ಕಾಮಗಾರಿಗಳನ್ನು ನಡೆಸಿ ಸಂಘದ ಹಣವನ್ನು ದುರುಪಯೋಗ ಪಡಿಸುವ ಕಾರ್ಯದಲ್ಲಿ ತೊಡಗಿರುವ ಸಂಗತಿ ತಿಳಿದು ಬಂದಿದೆ.
ವಾರ್ಷಿಕವಾಗಿ ಅರ್ಧ ಕೋಟಿಗೂ ಹೆಚ್ಚಿನ ಆದಾಯವಿರುವ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಸಂಪನ್ಮೂಲಗಳನ್ನು ತಮ್ಮ ವೈಯುಕ್ತಿಕ ಲಾಭಕ್ಕೆ ಬಳಸಿಕೊಳ್ಳುವ ಏಕಮಾತ್ರ ಉದ್ದೇಶ ಹೊಂದಿರುವ ಈ ತಂಡದ ಅವಧಿಯಲ್ಲಿ ಜಿಲ್ಲಾ ಸಂಘವು ಕೋಟ್ಯಂತರ ರೂಪಾಯಿ ಬೆಲೆಬಾಳುವ ತನ್ನ ಜಮೀನನ್ನು ಕಳೆದುಕೊಳ್ಳುವಂತಾಗಿದೆ. ನೂತನ ಕಟ್ಟಡದ ತಳ ಅಂತಸ್ತಿನಲ್ಲಿರುವ ಸಂಘದ ಕಚೇರಿಯ ನೆಲಸಮ ಆದೇಶವನ್ನು ಮಂಗಳೂರಿನ ಮಹಾನಗರ ಪಾಲಿಕೆ ಆಯುಕ್ತರು ಹೊರಡಿಸಿದ್ದಾರೆ.
ಆದುದರಿಂದ ನ್ಯಾಯಾಲಯದ ಆದೇಶದಿಂದ ದ.ಕ. ಜಿಲ್ಲಾ ನೌಕರರ ಸಂಘದ ಆಡಳಿತ ಮಂಡಳಿ ಅಸ್ತಿತ್ವ ಕಳೆದುಕೊಂಡಿರುವುದರಿಂದ ಜಿಲ್ಲಾ ಸಂಘಕ್ಕೆ ಆಡಳಿತಾಧಿಕಾರಿ ಅವರನ್ನು ನೇಮಿಸಿ ಸಂಘದ ಕಾರ್ಯ ಚಟುವಟಿಕೆಗಳು ಸುಗಮವಾಗಿ ನಡೆಯುವಂತಾಗಲು ತಕ್ಷಣ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಜಿಲ್ಲೆಯ ಎಲ್ಲಾ ಪ್ರಜ್ಞಾವಂತ ಸರಕಾರಿ ನೌಕರರ ಆಗ್ರಹವಾಗಿದೆ.