ನ್ಯಾಯಾಧೀಶೆಗೆ ಲೈಂಗಿಕ ಕಿರುಕುಳ ಪ್ರಕರಣ: ಹೈಕೋರ್ಟ್ ತನಿಖೆಯ ವರದಿ ಕೇಳಿದ ಮುಖ್ಯ ನ್ಯಾಯಮೂರ್ತಿ
ನ್ಯಾಯಾಧೀಶೆಗೆ ಲೈಂಗಿಕ ಕಿರುಕುಳ ಪ್ರಕರಣ: ಹೈಕೋರ್ಟ್ ತನಿಖೆಯ ವರದಿ ಕೇಳಿದ ಮುಖ್ಯ ನ್ಯಾಯಮೂರ್ತಿ
ಉತ್ತರ ಪ್ರದೇಶದ ಬಾರಬಂಕಿಯಲ್ಲಿ ಮಹಿಳಾ ನ್ಯಾಯಾಧೀಶರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಪ್ರಕರಣ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅಂಗಣಕ್ಕೆ ಕಾಲಿಟ್ಟಿದೆ.
ನಾನು ಬದುಕುವ ಇಚ್ಚೆಯನ್ನೇ ಕಳೆದುಕೊಂಡಿದ್ದೇನೆ. ನನಗೆ ಸಾಯಲು ಅನುಮತಿ ಕೊಡಿ ಎಂದು ಕೋರಿ ಮಹಿಳಾ ನ್ಯಾಯಾಧೀಶರು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಎರಡು ಪುಟಗಳ ಪತ್ರ ಪ್ರಚಾರ ಪಡೆಯುತ್ತಿದ್ದಂತೆಯೇ ಡಿ.ವೈ. ಚಂದ್ರಚೂಡ್ ಅವರು ಹೈಕೋರ್ಟ್‌ನಿಂದ ಪ್ರಕರಣದ ತನಿಖೆಯ ಸ್ಥಿತಿಗತಿಯ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಘಟನೆಯ ವಿವರ
ಬಾರಬಂಕಿಯಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾಗ ಪುರುಷ ನ್ಯಾಯಾಧೀಶರೊಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿತ್ತು. ಒಂದೂವರೆ ವರ್ಷದಿಂದ ಜೀವಂತ ಶವವಾಗಿ ಓಡಾಡುತ್ತಿದ್ದೇನೆ. ಈ ಆತ್ಮವಿಲ್ಲದ ದೇಹವನ್ನು ಗೌರವಯುತವಾಗಿ ಮುಕ್ತಾಯಗೊಳಿಸಲು ಅನುಮತಿ ನೀಡಿ ಎಂದು ಸಿಜೆಐ ಅವರಿಗೆ ಬರೆದ ಪತ್ರದಲ್ಲಿ ನ್ಯಾಯಾಧೀಶರು ಮನವಿ ಮಾಡಿದ್ದರು.
ಸಿಜೆಐ ಚಂದ್ರಚೂಡ್ ಸೂಚನೆ ಏನು..?
ಅಲಹಾಬಾದ್ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಖುದ್ದು ಪತ್ರ ಬರೆದಿರುವ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, ಆಂತರಿಕ ದೂರು ಸಮಿತಿ(ಐಸಿಸಿ) ನಡೆಸುತ್ತಿರುವ ತನಿಖೆಯ ವರದಿಯನ್ನು ತಮಗೆ ನೀಡುವಂತೆ ಸೂಚಿಸಿದ್ದಾರೆ. ಅದರ ಆಧಾರದಲ್ಲಿ ಅವರು ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇದೇ ವೇಳೆ, ಪ್ರಕರಣದ ಬಗ್ಗೆ ನ್ಯಾ. ಹೃಷಿಕೇಶ್ ರಾಯ್ ಅವರ ನೇತೃತ್ವದ ನ್ಯಾಯಪೀಠದ ಮುಂದೆ ಮಹಿಳಾ ನ್ಯಾಯಾಧೀಶರು ಸಲ್ಲಿಸಿರುವ ಅರ್ಜಿ ವಿಚಾರಣೆ ಬಂದಿತು.
ಆದರೆ, ಸದ್ರಿ ಪ್ರಕರಣ ಆಂತರಿಕ ದೂರು ಸಮಿತಿಯ ಮುಂದೆ ವಿಚಾರಣೆಯ ಹಂತದಲ್ಲಿ ಇರುವುದರಿಂದ ಈ ಅರ್ಜಿಯ ಬಗ್ಗೆ ಯಾವುದೇ ಆದೇಶ ಹೊರಡಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿತು.