ಪೋಕ್ಸೊ ಆರೋಪಿಯ ಖುಲಾಸೆ: ತೀರ್ಪು ನೀಡಿದ ಜಡ್ಜ್‌ಗೆ "ಟ್ರೈನಿಂಗ್ ಪಡೆಯಿರಿ" ಎಂದ ಹೈಕೋರ್ಟ್
ಪೋಕ್ಸೊ ಆರೋಪಿಯ ಖುಲಾಸೆ: ತೀರ್ಪು ನೀಡಿದ ಜಡ್ಜ್‌ಗೆ "ಟ್ರೈನಿಂಗ್ ಪಡೆಯಿರಿ" ಎಂದ ಹೈಕೋರ್ಟ್
ಪೊಕ್ಸೊ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ಜಡ್ಜ್ ಸಾಕ್ಷಿ ವಿಚಾರಣೆ ದಾಖಲಿಸುವ ವೇಳೆ ನಡೆದುಕೊಂಡ ರೀತಿಗೆ ಕರ್ನಾಟಕ ಹೈಕೋರ್ಟ್ ಕೆಂಡಾಮಂಡಲವಾಗಿದೆ. ಅಲ್ಲದೆ, ಆರೋಪಿಯನ್ನು ಆರೋಪಮುಕ್ತಗೊಳಿಸಿದ ಆದೇಶವನ್ನು ಬದಿಗೆ ಸರಿಸಿ ಆರೋಪಿಗೆ ಐದು ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ.
ನ್ಯಾ. ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ವಿಚಾರಣಾ ನ್ಯಾಯಾಲಯದ ನ್ಯಾಯಧೀಶರಿಗೆ ನ್ಯಾಯಾಂಗ ಅಕಾಡೆಮಿಯಲ್ಲಿ ಸ್ವಲ್ಪ ತರಬೇತಿ ನೀಡುವ ಅಗತ್ಯವಿದೆ. ಈ ಕಾರಣದಿಂದ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರು ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ತರಬೇತಿ ಪಡೆಯುವಂತೆ ಈ ಮೂಲಕ ಶಿಫಾರಸ್ಸು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿಚಾರಣಾ ನ್ಯಾಯಾಲಯ ತಪ್ಪು, ವಿಕೃತ ಮತ್ತು ಅಮಾನವೀಯವಾಗಿ ವರ್ತಿಸಿದೆ. ಸಂವೇದನಾಶೀಲತೆ ಕಳೆದುಕೊಂಡು ಪೋಕ್ಸೋ ವಿಶೇಷ ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ. ಪೋಕ್ಸೋ ನ್ಯಾಯಾಲಯ ಸಾಕ್ಷ್ಯಗಳನ್ನು ತಾಂತ್ರಿಕವಾಗಿ ಪರಾಮರ್ಶಿಸಿದೆ. ಆದರೆ, ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಸಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸ್ವತಂತ್ರ ಸಾಕ್ಷಿಗಳನ್ನು ಹಾಜರುಪಡಿಸಿಲ್ಲ ಮತ್ತು ಸಂತ್ರಸ್ತೆಗೆ ಯಾವುದೇ ಗಾಯವಾಗಿಲ್ಲ ಎಂದು ವೈದ್ಯರು ಮಂಡಿಸಿದ ದಾಖಲೆಗಳ ಸಹಿತ ಪುರಾವೆಗಳು ಹೇಳುತ್ತಿವೆ ಎಂಬ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತ್ತು.
ಪ್ರತಿ ಸಾಲಿನಲ್ಲಿಯೂ ಪ್ರಾಸಿಕ್ಯೂಷನ್ ಸಾಕ್ಷ್ಯಗಳಲ್ಲಿ ದೋಷ ಪತ್ತೆ ಹಚ್ಚಿ ತುಂಬಾ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವ ಮೂಲಕ ಪೋಕ್ಸೋ ನ್ಯಾಯಾಲಯ ನ್ಯಾಯದ ವಿಡಂಬನೆಯನ್ನು ಮಾಡಿದ್ದಾರೆ ಎಂದು ಕಟುವಾದ ಶಬ್ದಗಳಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣ: ಕರ್ನಾಟಕ Vs ವೆಂಕಟೇಶ್@ ವೆಂಕಪ್ಪ
ಕರ್ನಾಟಕ ಹೈಕೋರ್ಟ್, Crl A 100492/2021 Dated 18-10-2023