ವಕೀಲರ ಮೇಲೆ ಹಲ್ಲೆ: ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ತುರ್ತು ಸಭೆ- ಹಲವು ನಿರ್ಣಯ
ವಕೀಲರ ಮೇಲೆ ಹಲ್ಲೆ: ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ತುರ್ತು ಸಭೆ- ಹಲವು ನಿರ್ಣಯ
ಚಿಕ್ಕಮಗಳೂರಿನ ಪೊಲೀಸರು ವಕೀಲ ಪ್ರೀತಮ್ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ತುರ್ತು ಸಭೆ ಸೇರಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ 8 ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ.
ತುರ್ತು ಸಭೆಯ ಅಧ್ಯಕ್ಷತೆಯನ್ನು ಕೆಎಸ್‌ಬಿಸಿ ಅಧ್ಯಕ್ಷ ಎಚ್.ಎಲ್. ವಿಶಾಲ್ ರಘು ಅವರು ವಹಿಸಿದ್ದರು.
ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಕೈಗೊಳ್ಳುವ ತೀರ್ಮಾನ ಮತ್ತು ಆದೇಶವನ್ನು ಅನುಸರಿಸಿ ಮತ್ತೊಂದು ತುರ್ತು ಸಭೆ ಕರೆಯಲು ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮ ಹಾಗೂ ಹೋರಾಟದ ಸ್ವರೂಪವನ್ನು ಈ ಸಭೆಯಲ್ಲಿ ನಿರ್ಧರಿಸಲಾಗುವುದು ಎಂಬ ನಿರ್ಣಯವನ್ನು ಕೈಗೊಂಡಿದೆ.
ಚಿಕ್ಕಮಗಳೂರಿನ ವಕೀಲರ ಮೇಲೆ ಪೊಲೀಸರು ನಡೆಸಿದ ಅಮಾನವೀಯ ನಡೆಗಳನ್ನು ಕೆಎಸ್‌ಬಿಸಿ ತೀವ್ರವಾಗಿ ಖಂಡಿಸಿದೆ.
ಇದೇ ವೇಳೆ, ವಕೀಲರ ವಿರುದ್ಧದ ಅಮಾನವೀಯ ಹಲ್ಲೆಯನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿ ಪ್ರಕರಣವನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಂಡ ಕರ್ನಾಟಕ ಹೈಕೋರ್ಟ್ ನಡೆಯನ್ನು ಸ್ವಾಗತಿಸಿದೆ.
ತಪ್ಪಿತಸ್ಥ ಪೊಲೀಸರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿದ್ದು, ಈ ಪ್ರಕರಣವನ್ನು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೊಳಪಡಿಸಬೇಕು ಎಂದು ಒತ್ತಾಯಿಸಲಾಗಿದೆ.
ಪ್ರಕರಣ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಾಕಿ ಇರುವಾಗಲೇ ವಕೀಲರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿರುವ ಪೊಲೀಸರ ಕ್ರಮವನ್ನು ಕೆಎಸ್‌ಬಿಸಿ ತೀವ್ರವಾಗಿ ಖಂಡಿಸಿದೆ.
ವಕೀಲರ ವಿರುದ್ಧ ಪೊಲೀಸರು ಪ್ರತಿಭಟನೆಯನ್ನು ನಡೆಸಿ ಅತ್ಯಂತ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿರುವುದನ್ನು ರಾಜ್ಯ ವಕೀಲರ ಪರಿಷತ್ತು ಖಂಡಿಸಿದೆ. ಈ ವಿಷಯವನ್ನು ನ್ಯಾಯಪೀಠದ ಗಮನಕ್ಕೆ ತಂದು ಸೂಕ್ತ ನಿರ್ದೇಶನಕ್ಕೆ ಮನವಿ ಮಾಡಲು ತುರ್ತು ಸಭೆ ತೀರ್ಮಾನಿಸಿದೆ.