ಪ್ರಭಾವಿ ಸಚಿವರಿಗೆ ತಟ್ಟಿದ ಚೆಕ್ ಬೌನ್ಸ್ ಪ್ರಕರಣದ ಬಿಸಿ: ಭರ್ಜರಿ ದಂಡ ವಿಧಿಸಿದ ಕೋರ್ಟ್!
ಪ್ರಭಾವಿ ಸಚಿವರಿಗೆ ತಟ್ಟಿದ ಚೆಕ್ ಬೌನ್ಸ್ ಪ್ರಕರಣದ ಬಿಸಿ: ಭರ್ಜರಿ ದಂಡ ವಿಧಿಸಿದ ಕೋರ್ಟ್!
ರಾಜ್ಯ ಸರ್ಕಾರದ ಪ್ರಭಾವಿ ಸಚಿವರಿಗೇ ಚೆಕ್ ಅಮಾನ್ಯ ಪ್ರಕರಣದ ಬಿಸಿ ತಟ್ಟಿದೆ. ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಸಚಿವ ಮಧು ಬಂಗಾರಪ್ಪ ಅವರಿಗೆ ರೂ. 6.96 ಕೋಟಿ ರೂ.ಗಳ ದಂಡ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಈ ದಂಡವನ್ನು ಕಟ್ಟದೇ ಇದ್ದಲ್ಲಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ನ್ಯಾ. ಜೆ. ಪ್ರೀತ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಮಧು ಬಂಗಾರಪ್ಪ ಅವರು ನಿರ್ದೇಶಕರಾಗಿರುವ ಆಕಾಶ್ ಆಡಿಯೋ ಸಂಸ್ಥೆ ರಾಜೇಶ್ ಎಕ್ಸ್‌ಪೋರ್ಟ್ಸ್ ಲಿ. ಇವರಿಂದ ಬಂಡವಾಳವನ್ನು ಪಡೆದುಕೊಂಡಿದ್ದರು. ಕಂಪೆನಿಗಳ ನಡುವಿನ ಠೇವಣಿ (Inter Corporate Deposit-ICD) ಅನ್ವಯ ಆಕಾಶ್ ಆಡಿಯೋ ಸಂಸ್ಥೆ ಆರು ಕೋಟಿ ರೂ.ಗಳನ್ನು ಪಡೆದಿತ್ತು. ಸಂಸ್ಥೆಯ ನಿರ್ದೇಶಕರಾದ ಮಧು ಬಂಗಾರಪ್ಪ ಈ ಐಸಿಡಿ ಹಣ ಪಡೆದಿರುವ ಬಗ್ಗೆ ಸ್ವೀಕೃತಿಯನ್ನು ದೃಢಪಡಿಸಿದ್ದರು.
ಈ ಹಣವನ್ನು ವಾಪಸ್ ಮಾಡುವ ಭರವಸೆಯನ್ನು ನೀಡಿ 2011ರಲ್ಲಿ ಈ ಸಾಲಕ್ಕೆ ಪ್ರತಿಯಾಗಿ 6.60 ಕೋಟಿ ರೂ. ಮೊತ್ತಕ್ಕೆ ಚೆಕ್‌ನ್ನು ನೀಡಿದ್ದರು. ಈ ಚೆಕ್‌ನ್ನು ರಾಜೇಶ್ ಎಕ್ಸ್‌ಪೋರ್ಟ್ ಸಂಸ್ಥೆ ನಗದೀಕರಣಕ್ಕೆ ಬ್ಯಾಂಕ್‌ಗೆ ಹಾಕಿದಾಗ ಹಣದ ಕೊರತೆ ಎಂಬ ಕಾರಣಕ್ಕೆ ಚೆಕ್ ಅಮಾನ್ಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಮತ್ತು ಆಕಾಶ್ ಆಡಿಯೋ ವಿರುದ್ಧ ರಾಜೇಶ್ ಎಕ್ಸ್‌ಪೋರ್ಟ್ಸ್ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿತ್ತು.
ಈ ಕೇಸು ರದ್ದುಗೊಳಿಸುವಂತೆ ಕೋರಿ ಮಧು ಬಂಗಾರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ಬಾಕಿ ಇರುವ ಸಂದರ್ಭದಲ್ಲಿ ಮಧು ಬಂಗಾರಪ್ಪ ಅವರು 50 ಲಕ್ಷ ರೂ.ಗಳನ್ನು ಪಾವತಿಸಿದ್ದರು. ಉಳಿದ 6.10 ಕೋಟಿ ಹಣವನ್ನು ಸಂಸ್ಥೆಗೆ ಮರಳಿಸುವುದಾಗಿ ವಾಗ್ದಾನ ನೀಡಿದ್ದರು. ಆದರೆ, ಆ ಪ್ರಕಾರವಾಗಿ ಅವರು ನಡೆದುಕೊಂಡಿರಲಿಲ್ಲ.
ಈಗಾಗಲೇ ಪಾವತಿ ಮಾಡಿದ ರೂ. 50 ಲಕ್ಷ ರೂ.ಗಳನ್ನು ಹೊರತುಪಡಿಸುವಂತೆ ಮಾಡಲಾದ ಕೋರಿಕೆಯನ್ನು ಮನ್ನಿಸಲು ನಿರಾಕರಿಸಿದ ನ್ಯಾಯಾಲಯ, ಒಟ್ಟು 6.96 ಕೋಟಿ ಮತ್ತು 70 ಸಾವಿರ ರೂಗಳನ್ನು ಪರಿಹಾರವಾಗಿ ರಾಜೇಶ್ ಎಕ್ಸ್‌ಪೋರ್ಟ್ಸ್ ಸಂಸ್ಥೆಗೆ ಪಾವತಿಸುವಂತೆ ನ್ಯಾಯಾಲಯ ಆದೇಶ ನೀಡಿದ್ದು, ಶೂರಿನ ಬಾಂಡ್ ಮತ್ತು ಜಾಮೀನು ಬಾಂಡ್‌ನ್ನು ರದ್ದುಗೊಳಿಸಿತು.