ವಕೀಲರ ವಿರುದ್ಧದ ಎಫ್‌ಐಆರ್: ಮಧ್ಯಂತರ ತಡೆ ನೀಡಿದ ಕರ್ನಾಟಕ ಹೈಕೋರ್ಟ್
ವಕೀಲರ ವಿರುದ್ಧದ ಎಫ್‌ಐಆರ್: ಮಧ್ಯಂತರ ತಡೆ ನೀಡಿದ ಕರ್ನಾಟಕ ಹೈಕೋರ್ಟ್
ಪೊಲೀಸರ ತನಿಖೆ ಎದುರಿಸುವ ಆತಂಕದಿಂದ ಆರೋಪಿ ವಕೀಲರು ಬಚಾವಾಗಿದ್ದಾರೆ. ಚಿಕ್ಕಮಗಳೂರು ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ವಕೀಲರ ಮೇಲೆ ದಾಖಲಿಸಿರುವ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಆರೋಪಿ ವಕೀಲರು ಸೋಮವಾರ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ತುರ್ತು ವಿಚಾರಣೆಗೆ ಎತ್ತಿಕೊಂಡ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ತಮ್ಮ ವಿರುದ್ಧ ಚಿಕ್ಕಮಗಳೂರಿನ ಪೊಲೀಸರು ದುರುದ್ದೇಶಪೂರಿತವಾಗಿ ಎಫ್‌ಐಆರ್ ದಾಖಲಿಸಿದ್ದಾರೆ. ಅದನ್ನು ರದ್ದುಪಡಿಸಬೇಕು ಎಂದು ಕೋರಿ ನ್ಯಾಯವಾದಿಗಳಾದ ಡಿ.ಬಿ. ಸುಜೇಂದ್ರ, ಎ.ಕೆ. ಭುವನೇಶ್, ಕೆ.ಬಿ. ನಂದೀಶ್ ಮತ್ತು ಎಚ್.ಎಂ. ಸುಧಾಕರ್ ರಿಟ್ ಅರ್ಜಿ ಸಲ್ಲಿಸಿದ್ದರು.
ಇದೇ ವೇಳೆ, ಪೊಲೀಸರು ವಕೀಲರಾದ ಎನ್.ಟಿ. ಪ್ರೀತಮ್ ಅವರ ವಿರುದ್ಧ ದಾಖಲಿಸಿರುವ ಪ್ರತಿದೂರಿಗೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ನಗರ ಪೊಲೀಸ್ ಠಾಣಾ ಪೊಲೀಸರಿಗೆ ನೋಟೀಸ್ ಜಾರಿಗೊಳಿಸಿದೆ.
ನಾಲ್ವರು ವಕೀಲರ ಪರವಾಗಿ ಹಿರಿಯ ವಕೀಲ ವಿವೇಕ್ ಸುಬ್ಬಾ ರೆಡ್ಡಿ ಮತ್ತು ಕೆ.ಎನ್. ಫಣೀಂದ್ರ ವಾದ ಮಂಡಿಸಿದರು. ಕರ್ನಾಟಕ ರಾಜ್ಯ ವಕೀಲರ ಪರಿಷತ್ ಪರವಾಗಿ ಹಿರಿಯ ವಕೀಲರಾದ ಎಸ್. ಬಸವರಾಜ್ ಹಾಜರಿದ್ದರು.
ಘಟನೆ ಏನು...?
ಚಿಕ್ಕಮಗಳೂರಿನ ವಕೀಲ ಪ್ರೀತಮ್ ಅವರ ಮೇಲಿನ ಹಲ್ಲೆ ಬಳಿಕ ಕರ್ನಾಟಕ ಹೈಕೋರ್ಟ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ಕೈಗೆತ್ತಿಕೊಂಡಿತು.
ಈ ವಿದ್ಯಮಾನದ ಹಿನ್ನೆಲೆಯಲ್ಲಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿತ್ತು. ಅಲ್ಲದೆ, ವಕೀಲರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾದ ಆರೋಪಿ ಪೊಲೀಸರನ್ನು ಬಂಧಿಸಲಾಗಿತ್ತು.
ಇದಾದ ಬೆನ್ನಲ್ಲೇ, ಪೊಲೀಸರು ಮತ್ತು ಅವರ ಕುಟುಂಬ ಬೀದಿಗಿಳಿದು ಹೋರಾಟ ನಡೆಸಿತು. ಆರೋಪಿ ಪೊಲೀಸರ ವಿರುದ್ಧ ಕ್ರಮವನ್ನು ಖಂಡಿಸಿ, ಬಂಧಿತ ಪೊಲೀಸರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿತು. ಹಿರಿಯ ಪೊಲೀಸ್ ಅಧಿಕಾರಿಗಳ ಮನವಿ, ಸಂಧಾನಕ್ಕೂ ಜಗ್ಗಲಿಲ್ಲ. ರಾತ್ರಿ ಇಡೀ ಪ್ರತಿಭಟನೆಯ ಪರಿಣಾಮವಾಗಿ ಬಂಧಿತ ಆರೋಪಿ ಪೊಲೀಸರನ್ನು ಬಿಡುಗಡೆಗೊಳಿಸಲಾಯಿತು.
ಈ ಮಧ್ಯೆ, ವಕೀಲರ ವಿರುದ್ಧ ಪ್ರತಿ ದೂರು ದಾಖಲಿಸಬೇಕು ಎಂಬ ಪ್ರತಿಭಟನಾಕಾರರ ಒತ್ತಾಯದ ಮೇರೆಗೆ ವಕೀಲರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ವಕೀಲರ ವಿರುದ್ಧ ದುರುದ್ದೇಶಪೂರಿತವಾಗಿ ಒಟ್ಟು ನಾಲ್ಕು ಎಫ್‌ಐಆರ್‌ನ್ನು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರೇ ಕಾನೂನು ಉಲ್ಲಂಘಿಸಿದ್ದಾರೆ. ಹಾಗಾಗಿ, ವಕೀಲರ ವಿರುದ್ಧದ ಎಫ್‌ಐಆರ್‌ನ್ನು ರದ್ದುಪಡಿಸಬೇಕು ಎಂದು ಕೋರಿ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು.