ಸೈನಿಕರು ನಿವೃತ್ತಿ ಬಳಿಕ ಹಿಡುವಳಿ ಜಮೀನು ಹಿಂಪಡೆಯಬಹುದು: ಕರ್ನಾಟಕ ಹೈಕೋರ್ಟ್
ಸೈನಿಕರು ನಿವೃತ್ತಿ ಬಳಿಕ ಹಿಡುವಳಿ ಜಮೀನು ಹಿಂಪಡೆಯಬಹುದು: ಕರ್ನಾಟಕ ಹೈಕೋರ್ಟ್
ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಜಮೀನನ್ನು ಗೇಣಿಗೆ ನೀಡಿದ್ದ ಸೈನಿಕರು ತಮ್ಮ ನಿವೃತ್ತಿ ಬಳಿಕ ಗೇಣಿದಾರರಿಂದ ಹಿಂದೆ ಪಡೆಯಬಹುದು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪುತ್ತೂರಿನ ನಿವೃತ್ತ ಸೈನ್ಯಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಗೋಪಾಲಕೃಷ್ಣ ಭಟ್ ಅವರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ತೀರ್ಪು ಹೊರಡಿಸಿದೆ.
ಸೈನಿಕರು ನಿವೃತ್ತಿಯಾದ ಬಳಿಕ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ನಿಯಮ 15(5)ರ ಪ್ರಕಾರ ತಮ್ಮ ಜಮೀನನ್ನು ಗೇಣಿದಾರರಿಂದ ಹಿಂದಕ್ಕೆ ಪಡೆಯಬಹುದು ಎಂದು ನ್ಯಾಯಪೀಠ ತಿಳಿಸಿದೆ.
ದೇಶ ಕಾಯಲು ಪ್ರಾಣ ಪಣಕ್ಕಿಟ್ಟು ಸೇವೆ ಸಲ್ಲಿಸುವ ಸೈನ್ಯಾಧಿಕಾರಿ ತಮ್ಮ ಜಮೀನು ಹಿಂದಕ್ಕೆ ಪಡೆಯಲು ದಶಕಗಳ ಕಾಲ ಕಾನೂನು ಹೋರಾಟ ನಡೆಸುವಂತಾಗಿರುವುದು ದುರದೃಷ್ಟಕರ ಎಂದು ಹೇಳಿದ ನ್ಯಾಯಪೀಠ, ಸೈನಿಕರನ್ನು ಸರ್ಕಾರ ನಿಕೃಷ್ಟವಾಗಿ ಕಾಣುವ ಬದಲು ಮುತುವರ್ಜಿಯಿಂದ ನಡೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.
ಸದ್ರಿ ಪ್ರಕರಣದಲ್ಲಿ "ಉಳುವವನೇ ಭೂಮಿ ಒಡೆಯ" ಎಂಬ ಹಿಡುವಳಿ ನಿಯಮ ಅನ್ವಯಿಸುವುದಿಲ್ಲ. ಜಮೀನನ್ನು ಗೇಣಿದಾರರ ವಶಕ್ಕೆ ನೀಡಿದ್ದಲ್ಲಿ ಜಮೀನನ್ನು ಸೈನಿಕರು ತಮ್ಮ ಸೇವೆಯಿಂದ ನಿವೃತ್ತರಾದ ಬಳಿಕ ಹಿಂದಕ್ಕೆ ಪಡೆಯಲು ಮನವಿ ಸಲ್ಲಿಸಲು ಅವಕಾಶವಿದೆ.
ಹಾಗೆಯೇ, ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 15(5)ರ ಪ್ರಕಾರ ಸೈನಿಕರು ನಿವೃತ್ತಿ ಬಳಿಕ ತಮ್ಮ ಜಮೀನಿನ ಮಾಲಕತ್ವವನ್ನು ಹಿಂದಕ್ಕೆ ಪಡೆಯಬಹುದು. ಅದರಂತೆ ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ನಿವೃತ್ತ ಸೈನ್ಯಾದಿಕಾರಿಯ ಜಮೀನನ್ನು ಎಂಟು ವಾರದಲ್ಲಿ ಮರಳಿ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಗೋಪಾಲಕೃಷ್ಣ ಭಟ್ ಅವರು ತಮ್ಮ ತಂದೆಯಿಂದ ಬಂದಿದ್ದ ನಾಲ್ಕು ಎಕರೆ ಜಮೀನನ್ನು ಗೇಣಿದಾರರಿಂದ ಹಿಂದಕ್ಕೆ ಪಡೆಯಲು ಮುಂದಾಗಿದ್ದರು. ಈ ಭೂಮಿಯನ್ನು ಗೇಣಿದಾರರು 1940ರಿಂದ ಗೇಣಿ ಮಾಡುತ್ತಿದ್ದರು.
ಹೀಗಾಗಿ ಜಮೀನು ಮಾಲಕತ್ವ ಕೋರಿ ಗೋಪಾಲಕೃಷ್ಣ ಭಟ್ ಅರು 1993ರಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ನಿಯಮ 15(4)ರಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡಿರಲಿಲ್ಲ. ನಂತರದ ಕಾನೂನು ಹೋರಾಟದಲ್ಲಿ ಗೇಣಿದಾರರು ಹೈಕೋರ್ಟ್ ಮೆಟ್ಇಲೇರಿದ್ದರು. ಪ್ರಕರಣದ ವಿಚಾರಣೆಯ ಬಳಿಕ ಗೇಣಿದಾರರ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.
ಪ್ರಕರಣ: ಶ್ರೀಮತಿ ನಫೀಸಾ ಮತ್ತಿತರರು Vs ಕರ್ನಾಟಕ ಸರ್ಕಾರ ಮತ್ತಿತರರು
ಕರ್ನಾಟಕ ಹೈಕೋರ್ಟ್, WP 3420/2013, Dated 16-11-2022