ಸಂವಿಧಾನವೇ ಧರ್ಮ: ಅದಕ್ಕೆ ಹೊರತಾದ ಪ್ರತ್ಯೇಕ ಧರ್ಮ ಇಲ್ಲ: ಹೈಕೋರ್ಟ್ ಮಹತ್ವದ ಸಂದೇಶ
ಸಂವಿಧಾನವೇ ಧರ್ಮ: ಅದಕ್ಕೆ ಹೊರತಾದ ಪ್ರತ್ಯೇಕ ಧರ್ಮ ಇಲ್ಲ: ಹೈಕೋರ್ಟ್ ಮಹತ್ವದ ಸಂದೇಶ
ಕೋರ್ಟ್‌ಗೆ ಪ್ರತ್ಯೇಕ ಧರ್ಮ ಇಲ್ಲ. ಸಂವಿಧಾನವೇ ನಮ್ಮ ಧರ್ಮ. ಅದಕ್ಕೆ ಹೊರತಾದ ಯಾವ ಧರ್ಮವೂ ಇಲ್ಲ ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಾಮಾಜಿಕ ಕಾರ್ಯಕರ್ತ ಗುರುನಾಥ ವದ್ದೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸ್ಥಳೀಯ ದೇವಸ್ಥಾನವೊಂದಕ್ಕೆ ರಸ್ತೆ ನಿರ್ಮಾಣ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಗುರುನಾಥ ವದ್ದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ದೇವಸ್ಥಾನಕ್ಕೆ ರಸ್ತೆ ಇಲ್ಲ, ರಸ್ತೆ ನಿರ್ಮಿಸಿಕೊಡುವಂತೆ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದರು.
ದೇವಸ್ಥಾನಕ್ಕೆ ರಸ್ತೆ ನಿರ್ಮಾಣ ಮಾಡಲು ಕೋರ್ಟ್ ಯಾಕೆ ನಿರ್ದೇಶನ ನೀಡಬೇಕು? ಖಾಸಗಿ ಜಾಗದಲ್ಲಿ ದೇವಸ್ಥಾನ ಇದ್ದಾಗ ನಾವು ಈ ರೀತಿಯ ನಿರ್ದೇಶನ ನೀಡಲು ಬರುವುದಿಲ್ಲ ಎಂದು ನ್ಯಾಯಪೀಠ ಹೇಳಿತು. ಆಗ ಅರ್ಜಿದಾರರ ಪರ ವಕೀಲರು, ದೇವಸ್ಥಾನವನ್ನು ಸರ್ಕಾರಿ ಭೂಮಿಯಲ್ಲಿ ಕಟ್ಟಲಾಗಿದೆ ಎಂದು ಹೇಳಿದರು.
ಸರ್ಕಾರಿ ಜಾಗದಲ್ಲಿ ದೇವಸ್ಥಾನ ಕಟ್ಟಲು ಬರುವುದಿಲ್ಲ. ಇದು ಸುಪ್ರೀಂ ಕೋರ್ಟ್‌ನ ಆದೇಶದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಸರ್ಕಾರಿ ಜಾಗದಲ್ಲಿ ದೇವಸ್ಥಾನ ಕಟ್ಟಿದವರು ಯಾರು? ಅದಕ್ಕೆ ಅನುಮತಿ ನೀಡಿದ್ದು ಯಾರು ಎಂಬುದನ್ನು ಮೊದಲು ಹೇಳಿ ಎಂದು ನ್ಯಾಯಪೀಠ ವಕೀಲರನ್ನೇ ಪ್ರಶ್ನಿಸಿತು.
ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಸರ್ಕಾರಿ ಜಾಗದಲ್ಲಿ ಇರುವ ದೇವಸ್ಥಾನವನ್ನು ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶನ ನೀಡಲಾಗುವುದು ಎಂದು ಅರ್ಜಿದಾರರ ವಕೀಲರಿಗೆ ನ್ಯಾಯಪೀಠ ಹೇಳಿತು.
ಆಗ, ವಾದ ಮಂಡಿಸಿದ ವಕೀಲರು ಇದು ಹಿಂದೂ ದೇವಾಲಯ ಎಂದಾಗ, ನಮಗೆ ಯಾವುದೇ ಧರ್ಮ ಇಲ್ಲ. ಸಂವಿಧಾನವೇ ನಮ್ಮ ಧರ್ಮ. ನ್ಯಾಯಾಂಗಕ್ಕೆ ಪ್ರತ್ಯೇಕ ಧರ್ಮ ಎಂಬ ಭಾವನೆ ಇಲ್ಲ. ಜಾತ್ಯತೀತ ತತ್ವವನ್ನು ಅಳವಡಿಸಿಕೊಂಡಿರುವ ಸಂವಿಧಾನವೇ ನಮ್ಮ ಧರ್ಮ. ಅದನ್ನು ಮಾತ್ರ ಇಲ್ಲಿ ಪಾಲಿಸಲಾಗುತ್ತದೆ ಎಂದು ಖಡಕ್ ಆಗಿ ವಾರ್ನಿಂಗ್ ಕೊಟ್ಟರು.