ಮಗುವಿಗೆ ಪೂರ್ತಿ ಟಿಕೆಟ್ ನೀಡಿದ ಕಂಡಕ್ಟರ್: ಗ್ರಾಹಕ ನ್ಯಾಯಾಲಯ ಹಾಕಿದ ದಂಡ ಎಷ್ಟು ಗೊತ್ತೇ..?
ಮಗುವಿಗೆ ಪೂರ್ತಿ ಟಿಕೆಟ್ ನೀಡಿದ ಕಂಡಕ್ಟರ್: ಗ್ರಾಹಕ ನ್ಯಾಯಾಲಯ ಹಾಕಿದ ದಂಡ ಎಷ್ಟು ಗೊತ್ತೇ..?
12 ವರ್ಷದ ಒಳಗಿನ ಬಾಲಕನಿಗೆ ಪೂರ್ತಿ ಟಿಕೆಟ್ ಹರಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕನಿಗೆ ಗ್ರಾಹಕ ನ್ಯಾಯಾಲಯ ದಂಡ ಹಾಗೂ ಬಡ್ಡಿ ಸಹಿತ ಪೂರ್ತಿ ಟಿಕೆಟ್ ವಾಪಸ್ ನೀಡುವಂತೆ ಆದೇಶ ಹೊರಡಿಸಿದೆ.
ಬಾಗಲಕೋಟೆಯ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಈ ತೀರ್ಪು ನೀಡಿದ್ದು, ಈ ತೀರ್ಪು ಸಾರಿಗೆ ಸಂಸ್ಥೆಗೆ ಎಚ್ಚರಿಕೆಯ ಸಂದೇಶ ನೀಡಿದಂತಾಗಿದೆ.
ದೂರುದಾರರಾದ ದೀಪಾ ಹಿರೇಮಠ ಮುಧೋಳ ತಾಲೂಕಿನ ಅನಂತಪುರ ನಿವಾಸಿ. ಪುತ್ರನೊಂದಿಗೆ ಮುಧೋಳದಿಂದ ವಿಜಯಪುರಕ್ಕೆ ಹೊರಟಿದ್ದರು. ಪುತ್ರನಿಗೆ 10 ವರ್ಷ 11 ತಿಂಗಳು ಆಗಿದ್ದು, ಅರ್ಧ ಟಿಕೆಟ್ ನೀಡುವಂತೆ ಹೇಳಿದರೂ ಕಂಡೆಕ್ಟರ್ ಪೂರ್ತಿ ಟಿಕೆಟ್ ಪಡೆಯುವಂತೆ ಹಠ ಹಿಡಿದರು.
ಆಧಾರ್ ಕಾರ್ಡ್ ತೋರಿಸಿದರೂ ಒಪ್ಪದ ಕಾರಣ ಅನಿವಾರ್ಯವಾಗಿ ಪೂರ್ತಿ ಟಿಕೆಟ್ ಪಡೆದೇ ಪ್ರಯಾಣಿಸಬೇಕಾಯಿತು.
ಈ ಬಗ್ಗೆ ರಸ್ತೆ ಸಾರಿಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಅಧಿಕಾರಿಗಳು ಈ ಲೋಪವನ್ನು ಸರಿಪಡಿಸಲಿಲ್ಲ. ದೂರುದಾರರ ದೂರಿಗೆ ಕಿವಿಗೊಡಲಿಲ್ಲ. ಯಾವ ಸ್ಪಂದನೆಯೂ ಸಿಗದ ಹಿನ್ನೆಲೆಯಲ್ಲಿ ದೀಪಾ ಅಂತಿಮವಾಗಿ ಗ್ರಾಹಕ ನ್ಯಾಯಾಲಯದ ಕದ ಬಡಿದರು.
ತಕ್ಷಣ ನೋಟೀಸ್ ಜಾರಿಗೊಳಿಸಿದ ಗ್ರಾಹಕ ನ್ಯಾಯಾಲಯ, ಕೆಎಸ್‌ಆರ್‌ಟಿಸಿ ಸೇವಾ ನ್ಯೂನ್ಯತೆ ಮತ್ತು ಅನುಚಿತ ವ್ಯಾಪಾರ ಮಾಡಿರುವುದು ಸಾಬೀತಾಗಿದೆ. ದೂರುದಾರರಿಂದ ಹೆಚ್ಚುವರಿಯಾಗಿ ಪಡೆದ ರೂ. 50ನ್ನು ಬಡ್ಡಿ ಸಮೇತ ನೀಡಬೇಕು. ಜೊತೆಗೆ ಮಾನಸಿಕ ಹಿಂಸೆ ಅನುಭವಿಸಿದ ಕಾರಣ ವಿಶೇಷ ಪರಿಹಾರವಾಗಿ ರೂ. 2000/- ಹಾಗೂ ಪ್ರಕರಣದ ವೆಚ್ಚವಾಗಿ ರೂ. 1000/- ನೀಡುವಂತೆ ಆಯೋಗ ಆದೇಶಿಸಿದೆ.