ಪತಿ ನಪುಂಸಕ ಎಂದು ಆರೋಪಿಸುವುದು, ಪುರುಷತ್ವ ಪರೀಕ್ಷೆಗೆ ಒತ್ತಾಯಿಸುವುದು ಮಾನಸಿಕ ಕ್ರೌರ್ಯ: ಹೈಕೋರ್ಟ್
ಪತಿ ನಪುಂಸಕ ಎಂದು ಆರೋಪಿಸುವುದು, ಪುರುಷತ್ವ ಪರೀಕ್ಷೆಗೆ ಒತ್ತಾಯಿಸುವುದು ಮಾನಸಿಕ ಕ್ರೌರ್ಯ: ಹೈಕೋರ್ಟ್
ತನ್ನ ಪತಿಯನ್ನು 'ನಪುಂಸಕ' ಎಂದು ಆರೋಪಿಸುವುದು, ಅವರನ್ನು ಪುರುಷತ್ವ ಪರೀಕ್ಷೆಗೆ ಒಳಪಡಿಸಿ ಎಂದು ಒತ್ತಾಯಿಸುವುದು ಪತ್ನಿ ನಡೆಸುವ ಮಾನಸಿಕ ಕ್ರೌರ್ಯ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ನ್ಯಾ. ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಪತಿಯ ಮೇಲೆ ವರದಕ್ಷಿಣೆ ಬೇಡಿಕೆಯ ಆರೋಪ ಹೊರಿಸುವುದು, ವಿವಾಹೇತರ ಸಂಬಂಧಗಳ ಆರೋಪ ಮಾಡುವುದು ಮತ್ತು ಸ್ತ್ರೀ ಲೋಲ ಎಂದು ಆರೋಪಿಸುವುದು, ಪುರುಷತ್ವ ಪರೀಕ್ಷೆಗೆ ಒತ್ತಾಯಿಸುವುದು ಆತನನ್ನು ಮಾನಸಿಕ ಯಾತನೆ ಮತ್ತು ಆಘಾತಕ್ಕೆ ದೂಡಲು ಕಾರಣವಾಗುತ್ತದೆ ಎಂದು ತೀರ್ಪು ಹೇಳಿದೆ.
ಪತಿಗೆ ಕಿರುಕುಳ ನೀಡುವುದು, ಮಾನಹಾನಿಕರ ಆರೋಪಗಳನ್ನು ಮಾಡುವುದು ಮತ್ತು ಸ್ತ್ರೀ ಪೀಡಕ ಎಂದು ಕರೆಯುವುದೂ ಪತ್ನಿ ಪತಿಯ ವಿರುದ್ಧ ನಡೆಸುವ ಕ್ರೌರ್ಯಕ್ಕೆ ಸಮನಾಗಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಪರಸ್ಪರ ನಂಬಿಕೆ ಮತ್ತು ವಿಶ್ವಾಸಗಳೇ ದಾಂಪತ್ಯದ ಆಧಾರಸ್ತಂಬಗಳು. ಅರ್ಧ ನಂಬಿಕೆ ಮತ್ತು ಅರ್ಧ ವಿಶ್ವಾಸದಿಂದ ಜೀವನ ಸಾಗದು. ಹಾಗೆಯೇ, ಸಂಗಾತಿಯ ಬಗೆಗಿನ ಗೌರವಗಳು ಇಲ್ಲದಾಗ ಮತ್ತು ಕುಸಿದಾಗ ಮಾನಸಿಕ ನೆಮ್ಮದಿಯೂ ಇಲ್ಲದಾಗುತ್ತದೆ ಎಂಬುದನ್ನು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.
ಸಂಗಾತಿಯ ವರ್ಚಸ್ಸಿಗೆ ಕಳಂಕ ತರುವಂತಹ, ಸಾಮಾಜಿಕವಾಗಿ ಅವರ ಗೌರವಕ್ಕೆ ಚ್ಯುತಿ ತರುವಂತಹ ಅಜಾಗರೂಕ, ಮಾನಹಾನಿಕರ, ಅವಮಾನಕಾರಿ ಮತ್ತು ಆಧಾರರಹಿತ ಆರೋಪಗಳನ್ನು ಮಾಡುವುದು ಪತ್ನಿ ನಡೆಸುವ ಕ್ರೌರ್ಯವೇ ಆಗಿದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ದೆಹಲಿ ಹೈಕೋರ್ಟ್, Mat. App (F.C.) 178/2016 Dated 20-12-2023