ಕೋರ್ಟ್ ಆದೇಶ ಪಾಲಿಸದ ADLRಗೆ ದಂಡ, ಸೇವಾ ದಾಖಲೆಯಲ್ಲಿ ದಾಖಲು: ಸರ್ಕಾರಿ ಅಧಿಕಾರಿಗಳ ಉಡಾಫೆ ಧೋರಣೆಗೆ ಹೈಕೋರ್ಟ್ ತರಾಟೆ
ಕೋರ್ಟ್ ಆದೇಶ ಪಾಲಿಸದ ADLRಗೆ ದಂಡ, ಸೇವಾ ದಾಖಲೆಯಲ್ಲಿ ದಾಖಲು: ಸರ್ಕಾರಿ ಅಧಿಕಾರಿಗಳ ಉಡಾಫೆ ಧೋರಣೆಗೆ ಹೈಕೋರ್ಟ್ ತರಾಟೆ
ಕೋರ್ಟ್ ಆದೇಶ ಇದ್ದರೂ ಜಮೀನಿನ ಪೋಡಿ ಮತ್ತು ದಾಖಲೆ ದುರಸ್ತಿಗೆ ಕ್ರಮ ಕೈಗೊಳ್ಳದ ಬೆಂಗಳೂರು ಭೂ ದಾಖಲೆಗಳ ಸಹಾಯಕ ನಿರ್ದೇಶಕ (ADLR) ಮೋಹನ್ ಕುಮಾರ್ ಅವರಿಗೆ ಕರ್ನಾಟಕ ಹೈಕೋರ್ಟ್ ದಂಡ ವಿಧಿಸಿದ್ದು, ಸೇವಾ ದಾಖಲೆಗಳಲ್ಲಿ ಪ್ರತಿಕೂಲ ಅಂಶವನ್ನು ನಮೂದು ಮಾಡುವಂತೆ ಇಲಾಖಾ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾ. ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಈ ಆದೇಶದ ಪ್ರತಿಯನ್ನು ಎಲ್ಲ ಇಲಾಖೆಗಳಿಗೂ ಒದಗಿಸಬೇಕು, ಸರ್ಕಾರಿ ದಾವೆಯನ್ನು ನಡೆಸುವ ವಿಚಾರದಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮವಾಗಿ ಈ ಆದೇಶ ಇರಲಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ವಿವರ
ಬೆಂಗಳೂರಿನ ಯಲಹಂಕ ತಾಲೂಕಿನ ರಾಜನಕುಂಟೆಯ ಜಯಲಕ್ಷ್ಮಮ್ಮ ಎಂಬವರು ತಮ್ಮ ತಂದೆ ನಿಧನರಾಗಿದ್ದು, ಜಮೀನಿನ ಪೋಡಿ ಮತ್ತು ದುರಸ್ತಿ ಮಾಡುವಂತೆ ತಹಶೀಲ್ದಾರ್ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಿ್ದರು.
ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಮೂರು ತಿಂಗಳಲ್ಲಿ ಅರ್ಜಿದಾರರ ಜಮೀನಿನ ಪೋಡಿ ಮತ್ತು ದುರಸ್ತಿಗೆ ಕ್ರಮ ವಹಿಸುವಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕ (ADLR) ಮೋಹನ್ ಕುಮಾರ್ ಅವರಿಗೆ ನಿರ್ದೇಶನ ನೀಡಿತ್ತು.
ಇದರ ಹೊರತಾಗಿಯೂ, ಜಯಲಕ್ಷ್ಮಮ್ಮ 2022ರ ಮೇ ತಿಂಗಳಿನಲ್ಲಿ ಎಡಿಎಲ್‌ಆರ್‌ಗೆ ಪ್ರತ್ಯೇಕ ಮನವಿಯನ್ನೂ ನೀಡಿದ್ದರು. ಆದರೂ ಮೋಹನ್ ಕುಮಾರ್ ಈ ಆದೇಶ ಹಾಗೂ ಮನವಿಯನ್ನು ನಿರ್ಲಕ್ಷಿಸಿದ್ದರು.
ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಮೋಹನ್ ಕುಮಾರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲಾಗಿತ್ತು.
ಇದರ ವಿಚಾರಣೆ ನಡೆಸಿದ ವಿಭಾಗೀಯ ನ್ಯಾಯಪೀಠ, ಮೋಹನ್ ಕುಮಾರ್‌ಗೆ ನೋಟೀಸ್ ಜಾರಿಗೊಳಿಸಿ ಆದೇಶ ಅನುಪಾಲನಾ ವರದಿ ನೀಡುವಂತೆ ಸೂಚಿಸಿತ್ತು. ಇದಕ್ಕೆ ಉತ್ತರಿಸಿದ್ದ ಮೋಹನ್ ಕುಮಾರ್ ಏಕಸದಸ್ಯ ಪೀಠದ ಆದೇಶ ಪಾಲಿಸಲಾಗುವುದು ಮತ್ತು ಅದಕ್ಕೆ ಒಂದಷ್ಟು ಕಾಲಾವಕಾಶ ಬೇಕು ಎಂದು ಕೋರಿದ್ದರು. ಇಷ್ಟಾದರೂ ನ್ಯಾಯಾಲಯದ ಆದೇಶ ಪಾಲಿಸಿರಲಿಲ್ಲ.
ವಿಚಾರಣೆ ಸಂದರ್ಭದಲ್ಲಿ ಮೋಹನ್ ಖುದ್ದು ಹಾಜರಿದ್ದರು. ಅನುಪಾಲನಾ ವರದಿ ಸಲ್ಲಿಸದ ಹಿನ್ನೆಲೆಯಲ್ಲಿ ಕೆಂಡಾಮಂಡಲವಾದ ನ್ಯಾಯಪೀಠ, ಅಧಿಕಾರಿಯಿಂದ ಅನುಪಾಲನಾ ವರದಿಯನ್ನು ಬಯಸುತ್ತದೆ. ಉಡಾಫೆ, ನಿರ್ಲಕ್ಷ್ಯ ವಹಿಸಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹೀಗಾದರೆ, ಕಾನೂನು ಹೋರಾಟದಲ್ಲಿ ಜಯಿಸಿದ ಪಕ್ಷಕಾರರಿಗೆ ಕಾಗದದ ಡಿಕ್ರಿ ಮತ್ತು ಆದೇಶ ಮಾತ್ರ ಇರುತ್ತದೆ. ಇದು ನ್ಯಾಯಾಂಗ ಪ್ರಕ್ರಿಯೆಯ ಉದ್ದೇಶವಲ್ಲ ಎಂದು ನ್ಯಾಯಪೀಠ ಹೇಳಿದೆ.
ಸದ್ರಿ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿ ಕೆಲಸವನ್ನೂ ಮಾಡಲಿಲ್ಲ. ಆದೇಶ ಪಾಲಿಸದಿರುವ ಬಗ್ಗೆ ಸಮರ್ಥನೆಯನ್ನೂ ನೀಡಿಲ್ಲ. ಇದಕ್ಕೆ ವಿನಾಯಿತಿ ನೀಡಲಾಗದು. ಹಾಗಾಗಿ ಆರೋಪಿ ಅಧಿಕಾರಿಗೆ ದಂಡ ವಿಧಿಸಿ ಅವರ ಸರ್ವಿಸ್ ರಿಜಿಸ್ಟರ್‌ನಲ್ಲಿ ಈ ಬಗ್ಗೆ ಪ್ರತಿಕೂಲ ಅಂಶವನ್ನು ನಮೂದು ಮಾಡಬೇಕು ಎಂದು ಆದೇಶ ಹೊರಡಿಸಿತು.