"ಡಿಪ್ಲೊಮಾ ಪಡೆದವರು ವೈದ್ಯರಲ್ಲ": ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಹೇಳಿದ್ದೇನು..?
"ಡಿಪ್ಲೊಮಾ ಪಡೆದವರು ವೈದ್ಯರಲ್ಲ": ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಹೇಳಿದ್ದೇನು..?
ಸಮುದಾಯ ವೈದ್ಯಕೀಯ ಸೇವೆ ಮತ್ತು ಅವಶ್ಯಕ ವಿಷಯದಲ್ಲಿ "ಡಿಪ್ಲೊಮಾ ಪಡೆದವರು ವೈದ್ಯರಲ್ಲ" ಎಂಬ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ಸಹಮತ ವ್ಯಕ್ತಪಡಿಸಿದೆ.
ಕೆಜಿಎಫ್‌ನ ಅಣ್ಣಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.
ಅರ್ಹತೆ ಇಲ್ಲದೇ ಇದ್ದರೂ ವೈದ್ಯರು ಎಂದು ಹೇಳಿಕೊಂಡು ಗ್ರಾಮೀಣ ಭಾಗದಲ್ಲಿ ಜನರನ್ನು ವಂಚಿಸುವವರ ಪ್ರವೃತ್ತಿಗೆ ಅಂತ್ಯ ಹಾಡಬೇಕಾಗಿದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ಅರ್ಜಿದಾರರ ವಿದ್ಯಾಭ್ಯಾಸವು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥಾಪನಾ ಕಾಯ್ದೆ ಕಲಂ 2(ಕೆ) ಅಡಿ ಬರುವುದಿಲ್ಲ. ಹೀಗಾಗಿ ಅರ್ಜಿದಾರರು ವೈದ್ಯರಲ್ಲ. ಅವರು ವೈದ್ಯಕೀಯ ಸೇವೆ ಸಲ್ಲಿಸಲು ಅನುಮತಿ ನೀಡವುದಕ್ಕೆ ಸಾಧ್ಯವಿಲ್ಲ. ಈ ಕಾರಣದಿಂದ ಸರ್ಕಾರದ ನಿರ್ಧಾರ ಸಮಂಜಸವಾಗಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಪ್ರಕರಣದ ವಿವರ:
ಅರ್ಜಿದಾರರು ಸಿಎಂಎಸ್-ಇಡಿ ವ್ಯಾಸಂಗ ಪೂರ್ಣಗೊಳಿಸಿ ನವದೆಹಲಿಯಲ್ಲಿ ಅರೆ ವೈದ್ಯಕೀಯ ಕೋರ್ಸ್ ತರಬೇತಿ ಪಡೆದಿದ್ದು, ಅರೆ ವೈದ್ಯಕೀಯ ಶಿಕ್ಷಣ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿದ್ದಾರೆ.
ಈ ಪ್ರಮಾಣ ಪತ್ರದ ಆಧಾರದಲ್ಲಿ ಬಂಗಾರಪೇಟೆ ತಾಲೂಕಿನ ಕೆಜಿಎಫ್ ಮಿನಿ ಇಬ್ರಾಹಿಂ ರಸ್ತೆಯಲ್ಲಿ ಕ್ಲೀನಿಕ್ ಆರಂಭಿಸಿದ್ದರು. ಹಲವಾರು ವರ್ಷಗಳಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.
ಖಾಸಗಿಯಾಗಿ ವೈದ್ಯಕೀಯ ಸೇವೆ ಸಲ್ಲಿಸುವವರು ರಾಜ್ಯದಲ್ಲಿ 2008ರ ಜನವರಿ 23ರಿಂದ ಜಾರಿಗೆ ಬಂದಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ-2007ರ ಅನುಸಾರ ಅರ್ಜಿ ಸಲ್ಲಿಸಿ ಆ ನಂತರವೇ ವೈದ್ಯಕೀಯ ಸೇವೆ ಸಲ್ಲಿಸಬೇಕು ಎಂದು ಸರ್ಕಾರ ಸೂಚನೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಅರ್ಜಿದಾರರು ಆನ್‌ಲೈನ್‌ನಲ್ಲಿ ತಮ್ಮ ಕ್ಲೀನಿಕ್‌ನ್ನು ನೋಂದಾಯಿಸಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸಕ್ಷಮ ಪ್ರಾಧಿಕಾರವು ತಿರಸ್ಕರಿಸಿ ಹಿಂಬರಹ ನೀಡಿತ್ತು. ಈ ಹಿಂಬರಹ ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.