ನೌಕರರ ಭವಿಷ್ಯ ನಿಧಿ-EPFO: ಜನ್ಮ ದಿನಾಂಕ ತಿದ್ದುಪಡಿಗೆ ಆಧಾರ್ ಪರಿಗಣಿಸಲ್ಲ
ನೌಕರರ ಭವಿಷ್ಯ ನಿಧಿ-EPFO: ಜನ್ಮ ದಿನಾಂಕ ತಿದ್ದುಪಡಿಗೆ ಆಧಾರ್ ಪರಿಗಣಿಸಲ್ಲ
ನೌಕರರ ಭವಿಷ್ಯ ನಿಧಿ ಸಂಘಟನೆ(EPFO) ಜನ್ಮ ದಿನಾಂಕದ ಪರಿಷ್ಕರಣೆಗೆ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್ ಕಾರ್ಡ್‌ನ್ನು ಕೈಬಿಟ್ಟು ಸುತ್ತೋಲೆ ಹೊರಡಿಸಿದೆ.
ಇದುವರೆಗೆ ಇಪಿಎಫ್‌ಓ ಚಂದಾದಾರರು ತಮ್ಮ ಜನ್ಮ ದಿನಾಂಕದ ತಿದ್ದುಪಡಿಗೆ ಅರ್ಹ ದಾಖಲೆಯಾಗಿ ಆಧಾರ್ ಕಾರ್ಡ್‌ನ್ನು ಸಲ್ಲಿಸುತ್ತಿದ್ದರು. ಇನ್ನು ಮುಂದೆ ಈ ದಾಖಲೆಯನ್ನು ಆಧಾರವಾಗಿ ಪರಿಗಣಿಸುವುದಿಲ್ಲ.
ಈ ಉದ್ದೇಶಕ್ಕಾಗಿ ಜನನ ಪ್ರಮಾಣ ಪತ್ರ, ಅಂಕಪಟ್ಟಿ, ಪ್ಯಾನ್ ಕಾರ್ಡ್‌ನ್ನು ಬಳಸಬಹುದು ಎಂದು ನೌಕರರ ಭವಿಷ್ಯ ನಿಧಿ ಸಂಘಟನೆ(EPFO) ತಿಳಿಸಿದೆ.
ಈ ಆದೇಶಕ್ಕೆ ಕಾರಣವಾದ ಅಂಶಗಳು:
ಜನ್ಮ ದಿನಾಂಕ ತಿದ್ದುಪಡಿಗೆ ಆಧಾರ್ ಕಾರ್ಡ್‌ನ್ನು ಅರ್ಹ ದಾಖಲೆಯಾಗಿ ಬಳಸಬಾರದು ಎಂದು ವಿವಿಧ ನ್ಯಾಯಾಲಯಗಳು ಹಲವು ಪ್ರಕರಣಗಳಲ್ಲಿ ತೀರ್ಪು ನೀಡಿವೆ.
ಈ ಮಧ್ಯೆ, ನೌಕರರ ಭವಿಷ್ಯ ನಿಧಿ ಸಂಘಟನೆಯು ತನ್ನ ಚಂದಾದಾರರ ಜನ್ಮದಿನಾಂಕದ ತಿದ್ದುಪಡಿಗೆ ಆಧಾರ್‌ನ್ನು ಅರ್ಹ ದಾಖಲೆಯಾಗಿ ಬಳಸುತ್ತಿರುವುದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(UIDAO)ದ ಗಮನಕ್ಕೆ ಬಂದಿತ್ತು. ಅದೇ ರೀತಿ, ಸರ್ಕಾರದ ವಿವಿಧ ಇಲಾಖೆಗಳಲ್ಲೂ ಇದೇ ಕ್ರಮಗಳನ್ನು ನಡೆಸಲಾಗುತ್ತಿತ್ತು.
ಈ ಬಗ್ಗೆ ವೈಯಕ್ತಿಕ ಗುರುತು ಮತ್ತು ದೃಢೀಕರಣಕ್ಕಾಗಿ ಮಾತ್ರವಷ್ಟೇ ಆಧಾರ್ ಬಳಸಬೇಕು, ಹುಟ್ಟಿದ ದಿನಾಂಕ ತಿದ್ದುಪಡಿಗೆ ಪರಿಗಣಿಸಬಾರದು ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ 22-12-2023ರಂದು ಹೊರಡಿಸಿದ ಆದೇಶ/ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿತ್ತು.
ಈ ಆದೇಶ ಹೊರಬೀಳುತ್ತಲೇ ಪಿಎಫ್ ಸಂಘಟನೆ ಹೊಸ ತಿದ್ದುಪಡಿಗೆ ಮುಂದಾಗಿದೆ.