ಮೃತ ಮಗಳ ಉತ್ತರಾಧಿಕಾರಿಗಳಿಗೂ ಆಸ್ತಿ ಹಕ್ಕು: ಕರ್ನಾಟಕ ಹೈಕೋರ್ಟ್
ಮೃತ ಮಗಳ ಉತ್ತರಾಧಿಕಾರಿಗಳಿಗೂ ಆಸ್ತಿ ಹಕ್ಕು: ಕರ್ನಾಟಕ ಹೈಕೋರ್ಟ್
ಮಗಳು ಮೃತಪಟ್ಟಿದ್ದರೂ ಅವರ ಉತ್ತರಾಧಿಕಾರಿಗಳಿಗೆ ಆಸ್ತಿ ಹಕ್ಕು ಇದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹಿಂದೂ ಉತ್ತರಾಧಿಕಾರದ ಕಾಯ್ದೆಗೆ ತಿದ್ದುಪಡಿ ತುರವ ಮೊದಲೇ ಮಗಳು ಮೃತಪಟ್ಟಿದ್ದಾರೆ ಎಂಬ ಕಾರಣಕ್ಕೆ ಆಕೆಯ ಕಾನೂನುರೀತ್ಯಾ ವಾರಿಸುದಾರರಿಗೆ ಆಸ್ತಿಯ ಹಕ್ಕು ಇಲ್ಲ ಎಂದು ಹೇಳಲು ಬರುವುದಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ನಿವಾಸಿ ಚನ್ನಬಸಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಗೊಂಡ ನ್ಯಾ. ಸಚಿನ್ ಮಗದೂಮ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಅರ್ಜಿದಾರರ ಅರ್ಜಿಯನ್ನು ವಜಾಗೊಳಿಸಿದೆ.
ವಿನೀತ್ ಶರ್ಮಾ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಪೀಠ, ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠ ಈ ಬಗ್ಗೆ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದೆ. ಈ ತೀರ್ಪು ಪೂರ್ವಾನ್ವಯವಾಗುತ್ತದೆ ಎಂಬುದನ್ನೂ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.
ಹೆಣ್ಣು ಮಕ್ಕಳಿಗೂ ಕೋ-ಪಾರ್ಸನರಿ ಹಕ್ಕುಗಳು ನೀಡಿ ಹಿಂದೂ ಉತ್ತರಾಧಿಕಾರಿ ಕಾಯ್ದೆಗೆ 9-09-2005ರಂದು ತಿದ್ದುಪಡಿ ತರಲಾಗಿದೆ. ಇದೇ ಕಾರಣಕ್ಕೆ ಪೂರ್ವಜರ ಆಸ್ತಿಯ ಮೇಲಿನ ಆಸ್ತಿಯ ಹಕ್ಕುಗಳನ್ನು ಆಕೆಯ ಕಾನೂನಾತ್ಮಕ ವಾರಿಸುದಾರರಿಂದ ಕಸಿದುಕೊಳ್ಳುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಕಾಯ್ದೆಯ ತಿದ್ದುಪಡಿಯು ಲಿಂಗ ಸಮಾನತೆಯನ್ನು ಖಾತ್ರಿಪಡಿಸುತ್ತದೆ ಹಾಗೂ ಹೆಣ್ಣು ಮಕ್ಕಳು ಮತ್ತು ಅವರ ವಾರಿಸುದಾರರು ಅವರ ಸರಿಯಾದ ಪಾಲನ್ನು ಪಡೆಯಲು ಅವಕಾಶ ಕಲ್ಪಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಮಿತಾಕ್ಷರ ಸಂಹಿತೆಯ ಪ್ರಕಾರ ಕೋ-ಪಾರ್ಸನರಿಯು ಮಗಳನ್ನು ಕೋ ಪಾರ್ಸನರಿ ಎಂದು ಉಲ್ಲೇಖಿಸುತ್ತದೆ. ಪೂರ್ವಜರ ಆಸ್ತಿಯು ಮಗಳು ನಿಧನ ಹೊಂದಿದಾಗ ಆಕೆಯ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಲಭಿಸಲಿದೆ.
ಗಂಡು ಮಕ್ಕಳಂತೆಯೇ ಹೆಣ್ಣು ಮಕ್ಕಳಿಗೂ ಆಸ್ತಿ ಹಕ್ಕು ನೀಡುವ ಮೂಲಕ ಐತಿಹಾಸಿಕ ಸಮತೋಲನವನ್ನು ಸರಿಪಡಿಸುತ್ತದೆ. ಹೀಗಾಗಿ ಪುತ್ರನಂತೆ ಮಗಳೂ ಮರಣ ಹೊಂದಿದಾಗ ಅವರು ಪೂರ್ವಜರ ಆಸ್ತಿಯಲ್ಲಿ ಪಾಲು ಪಡೆದಂತೆ ಸಮಾನವಾದ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಹೈಕೋರ್ಟ್ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.