ನಕಲಿ ಅಂಕಪಟ್ಟಿ ಜಾಲ: ಗ್ರಾಮ ಲೆಕ್ಕಾಧಿಕಾರಿ ಸಹಿತ 8 ಸರ್ಕಾರಿ ನೌಕರರಿಗೆ ಜೈಲು ಶಿಕ್ಷೆ !
ನಕಲಿ ಅಂಕಪಟ್ಟಿ ಜಾಲ: ಗ್ರಾಮ ಲೆಕ್ಕಾಧಿಕಾರಿ ಸಹಿತ 8 ಸರ್ಕಾರಿ ನೌಕರರಿಗೆ ಜೈಲು ಶಿಕ್ಷೆ !
ನಕಲಿ ಅಂಕಪಟ್ಟಿ ಸೃಷ್ಟಿಸಿ ಕೆಲಸ ಗಿಟ್ಟಿಸಿಕೊಂಡವರಿಗೆ ನಡುಕ ಶುರುವಾಗಿದೆ. ನಕಲಿ ಅಂಕಪಟ್ಟಿ ಸೃಷ್ಟಿಸಿ ಸರ್ಕಾರಿ ನೌಕರಿ ಪಡೆದಿರುವ 8 ಮಂದಿ ಅಧಿಕಾರಿಗಳನ್ನು ನ್ಯಾಯಾಲಯ ಜೈಲಿಗೆ ತಳ್ಳಿದೆ.
ದ್ವಿತೀಯ ಪದವಿ ಪೂರ್ವ ಶಿಕ್ಷಣ ಮಂಡಳಿಯ ನಕಲಿ ಅಂಕಪಟ್ಟಿ ತಯಾರಿಸಿದ್ದ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಪಡೆದಿದ್ದ ವಿವಿಧ ಜಿಲ್ಲೆಯ 8 ಮಂದಿಗೆ ಚಾಮರಾಜ ನಗರದ ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಚಾಮರಾಜ ನಗರ ಜಿಲ್ಲೆಯಲ್ಲಿ ಖಾಲಿ ಇದ್ದ 46 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ 2012ರ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ಹುದ್ದೆಯ ಆಕಾಂಕ್ಷಿಗಳ ಮೂಲಕ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಯಾಗಿತ್ತು. ದ್ವಿತೀಯ ಪಿಯುಸಿ ವಿದ್ಯಾರ್ಹತೆ ಅಂಕಪಟ್ಟಿಯನ್ನು ಪರಿಶೀಲಿಸಿ ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ಈ ಎಂಟು ಮಂದಿ ಸಹಿತ ಎಲ್ಲ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಆಯ್ಕೆ ನಡೆದಿತ್ತು.
ಅಭ್ಯರ್ಥಿಗಳ ಅಂಕಪಟ್ಟಿಯ ನೈಜತೆ ಪರಿಶೀಲಿಸಿದಾಗ ಎಂಟು ಮಂದಿ ಖದೀಮರ ಬಂಡವಾಳ ಬಯಲಾಗಿದೆ. ಆರೋಪಿಗಳು ನೇಮಕಾತಿ ಪ್ರಾಧಿಕಾರಕ್ಕೆ ನಕಲಿ ಅಂಕಪಟ್ಟಿ ಸಲ್ಲಿಸಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಪಡೆದು ಸರ್ಕಾರಕ್ಕೆ ವಂಚನೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ.
ಈ ಆರೋಪಿಗಳ ವಿರುದ್ಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹಾಗೆಯೇ ಈ ಎಂಟು ಮಂದಿಯನ್ನು ಸೇವೆಯಿಂದ ವಜಾ ಮಾಡಲಾಗಿತ್ತು.
ತನಿಖೆ ಪೂರ್ಣಗೊಂಡ ನಂತರ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಎಸ್. ಹೊನ್ನಸ್ವಾಮಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಎಂಟು ಮಂದಿಗೂ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.
ಪ್ರಕರಣದಲ್ಲಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಎ.ಸಿ. ಮಹೇಶ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.
ಶಿಕ್ಷೆಗೆ ಗುರಿಯಾದ ಸರ್ಕಾರಿ ಅಧಿಕಾರಿಗಳು:
ಕೋಲಾರ ತಾಲೂಕಿನ ಪಟ್ಣ ಗ್ರಾಮದ ಸುನೀಲ್ ಕುಮಾರ್
ಮುಳಬಾಗಿಲು ತಾಲೂಕಿನ ಅಪ್ಪನಹಳ್ಳಿಯ ಷಣ್ಮುಗ
ಚಾಮರಾಜನಗರ ತಾಲೂಕಿನ ಕುಕ್ಕಲದೊಡ್ಡಿಯ ನಾರಾಯಣಸ್ವಾಮಿ
ಹಾಸನ ಜಿಲ್ಲೆ ಅರಸೀಕರೆ ತಾಲೂಕು ಕುರುವಂಕ ಗ್ರಾಮದ ಸಂತೋಷ್ ಕುಮಾರ್
ಚಾಮರಾಜನಗರ ತಾಲೂಕಿನ ಅಂಕಪುರ ಗ್ರಾಮದ ಎ.ಬಿ.ಶಂಕರ
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕು ಚೆನ್ನಹಳ್ಳಿ ಗ್ರಾಮದ ಸಿ.ಎನ್. ಶ್ರೀರಾಮ್
ದೊಡ್ಡಬಳ್ಳಾಪುರ ತಾಲೂಕು ಹೊಸಹಳ್ಳಿಯ ಮುನಿರಾಜು
ಹೊಸಕೋಟೆ ತಾಲೂಕಿನ ನಕ್ಕನಹಳ್ಳಿ ಗ್ರಾಮದ ಎನ್. ಬಿ. ಸಿದ್ದಲಿಂಗಯ್ಯ
(ಎಲ್ಲರೂ 24ರಿಂದ 39ರ ವಯೋಮಾನದ ಒಳಗಿನವರು)