ಕೇಸು ಹಾಕಿದ ತಕ್ಷಣ ಸರ್ಕಾರಿ ನೌಕರನ ವಜಾ ಸರಿಯಲ್ಲ: ಹೈಕೋರ್ಟ್ ತೀರ್ಪು
ಕೇಸು ಹಾಕಿದ ತಕ್ಷಣ ಸರ್ಕಾರಿ ನೌಕರನ ವಜಾ ಸರಿಯಲ್ಲ: ಹೈಕೋರ್ಟ್ ತೀರ್ಪು
- ಮೂಲ್ಕಿ ನಿವಾಸಿ ಗಣೇಶ್ ವಜಾ ಪ್ರಕರಣ
- ಬಿಲ್ ಕಲೆಕ್ಟರ್ ಆಗಿದ್ದ ಗಣೇಶ
- ದ.ಕ. ಜಿಲ್ಲೆಯ ಅತ್ತಿಕೆರೆ ಗ್ರಾ.ಪಂ. ಬಿಲ್ ಕಲೆಕ್ಟರ್
- ಗ್ರಾ.ಪಂ. ಆಡಳಿತದ ಆದೇಶಕ್ಕೆ ಹಿನ್ನಡೆ
- ಗಣೇಶನ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲು
ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದ ಮಾತ್ರಕ್ಕೆ ನೌಕರರನ್ನು ಸೇವೆಯಿಂದ ವಜಾಗೊಳಿಸಲು ಆಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ಗಣೇಶ್ ಎಂಬಾತನನ್ನು ಬಿಲ್ ಕಲೆಕ್ಟರ್ ಹುದ್ದೆಯಿಂದ ವಜಾಗೊಳಿಸಲಾಗಿತ್ತು.
ಈ ಬಗ್ಗೆ ತೀರ್ಮಾನ ಕೈಗೊಂಡಿದ್ದ ಗ್ರಾಮ ಪಂಚಾಯತ್ ಆದೇಶವನ್ನು ಕರ್ನಾಟಕ ಹೈಕೋರ್ಟ್ ನ್ಯಾಯಪೀಠ ರದ್ದುಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಸಾಮಾನ್ಯವಾಗಿ, ಸರ್ಕಾರಿ ನೌಕರರು ಅಪರಾಧ ಪ್ರಕರಣಗಳಲ್ಲಿ ದೋಷಿ ಎಂದು ತೀರ್ಮಾನಿ ನ್ಯಾಯಾಲಯ ತೀರ್ಪು ನೀಡಿದ ನಂತರವೇ ಆರೋಪಿ ನೌಕರನನ್ನು ಸೇವೆಯಿಂದ ವಜಾಗೊಳಿಸಲಾಗುತ್ತದೆ. ಆದರೆ, ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ಬಾಕಿ ಇದೆ ಎಂಬ ಕಾರಣಕ್ಕೆ ಉದ್ಯೋಗಿಯನ್ನು ಸೇವೆಯಿಂದ ವಜಾ ಮಾಡಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಹಾಗಾಗಿ, ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಉದ್ಯೋಗಿಯಾಗಿರುವ ಗಣೇಶ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ವಿಚಾರಣೆ ಹಂತದಲ್ಲಿ ಇರುವುದರಿಂದ ಸೇವೆಯಿಂದ ವಜಾಗೊಳಿಸಿರುವ ತೀರ್ಪು ದೋಷಪೂರಿತವಾಗಿದೆ ಎಂದು ವಿಭಾಗೀಯ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಇದೇ ರೀತಿ, ತಮ್ಮ ವಿರುದ್ಧ ಆರೋಪಗಳಿಗೆ ವಿವರಣೆ ನೀಡಲು ಅವಕಾಶ ಕಲ್ಪಿಸದೆ ಸೇವೆಯಿಂದ ಉದ್ಯೋಗಿಯನ್ನು ವಜಾಗೊಳಿಸಿರುವುದು ಸಂವಿಧಾನದ ಪರಿಚ್ಛೇದ 14ರ ಅಡಿಯಲ್ಲಿ ಅಡಕಗೊಳಿಸಿರುವುದು ಸಹಜ ನ್ಯಾಯ ತತ್ವದ ಸ್ಪಷ್ಟ ಉಲ್ಲಂಘನೆಯಾಗಿದೆ. ಪ್ರಕರಣದಲ್ಲಿ ನಡೆದಿರುವಂತೆ ಉದ್ಯೋಗವನ್ನು ಕಳಿಸಿದುಕೊಳ್ಳುವುದು ಉದ್ಯೋಗಿಯ ಜೀವನೋಪಾಯವನ್ನು ಕಸಿದುಕೊಂಡಂತೆ. ಅದು ಸಂವಿಧಾನದ ಪರಿಚ್ಛೇದ 21ರಲ್ಲಿ ಕಲ್ಪಿಸಿರುವ ಮೂಲಭೂತ ಹಕ್ಕುಗಳಾದ ಜೀವಿಸುವ ಮತ್ತು ಸ್ವಾತಂತ್ಯದ ಹಕ್ಕಿನ ಉಲ್ಲಂಘನೆ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.
ಇನ್ನು ಸೇವೆಯಿಂದ ವಜಾಗೊಂಡ ನಂತರ ಗಣೇಶ್ ಉದ್ಯೋಗದಿಂದ ಹೊರಗುಳಿದ ಅವಧಿಯಲ್ಲಿ ಆತನಿಗೆ ಹಿಂಬಾಕಿ ಪಾವತಿಸುವ ವಿಚಾರದ ಕುರಿತು ಗ್ರಾಮ ಪಂಚಾಯಿತಿ ತನ್ನ ವಿವೇಚನೆ ಮೇರೆಗೆ ನಿರ್ಧಾರ ಕೈಗೊಳ್ಳಬಹುದು ಎಂದು ನ್ಯಾಯಪೀಠ ತಿಳಿಸಿದೆ.