ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಲ್ಲಿ ಒಂದು ದಿನ ವಿಳಂಬವೂ ಗಣ್ಯ: ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ತರಾಟೆ
ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಲ್ಲಿ ಒಂದು ದಿನ ವಿಳಂಬವೂ ಗಣ್ಯ: ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ತರಾಟೆ
ಹೇಬಿಯಸ್ ಕಾರ್ಪಸ್ ಪ್ರಕರಣವನ್ನು 14 ಬಾರಿ ಮುಂದೂಡಿದ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ಸದ್ರಿ ಪ್ರಕರಣವನ್ನು ನಿರ್ವಹಿಸಿದ ರೀತಿಗೆ ಸುಪ್ರೀಂ ಕೋರ್ಟ್ ತೀವ್ರ ಆಘಾತ ವ್ಯಕ್ತಪಡಿಸಿದೆ.
ಸಂವಿಧಾನದ ಅಡಿಯಲ್ಲಿ ವ್ಯಕ್ತಿಯ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆ ಎದುರಾದಾಗ ಒಂದು ದಿನದ ವಿಳಂಬವೂ ಲೆಕ್ಕಕ್ಕೆ ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಎಪ್ರಿಲ್ 10, 2025ರಂದು ಪ್ರಕರಣವನ್ನು ಮುಂದೂಡಿರುವ ಕರ್ನಾಟಕ ಹೈಕೋರ್ಟ್ ನ್ಯಾಯಪೀಠದ ಆದೇಶಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಹೇಬಿಯಸ್ ಕಾರ್ಪಸ್ ಪ್ರಕರಣವನ್ನು 2025ರ ಎಪ್ರಿಲ್‌ಗೆ ಮುಂದೂಡಿದ ಕರ್ನಾಟಕ ಹೈಕೋರ್ಟ್ ನ್ಯಾಯಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಬಿ.ಆರ್. ಗವಾಯಿ ಮತ್ತು ನ್ಯಾ. ಸಂದೀಪ್ ಮೆಹ್ತಾ ಅವರಿದ್ದ ನ್ಯಾಯಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತು.
ಪಕ್ಷಕಾರರ ಖುದ್ದು ಹಾಜರಾತಿಗೆ ಸೂಚಿಸಿ ಹೈಕೋರ್ಟ್ ಅಕ್ಟೋಬರ್ 5, 2023ರಂದು ಸೂಚಿಸಿತ್ತಾದರೂ, ಆ ಬಳಿಕ ಪ್ರಕರಣವನ್ನು 14 ಬಾರಿ ಮುಂದೂಡಲಾಗಿದೆ ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಮಹಿಳೆಯ ಸಂಗಾತಿ ಮತ್ತು ಆತನ ಪೋಷಕರು ಮಹಿಳೆಯ ಯೋಗಕ್ಷೇಮ ವಿಚಾರಿಸಿಕೊಳ್ಳಲು ದುಬೈನಿಂದ ಬೆಂಗಳೂರಿಗೆ ಆಗಾಗ ಪ್ರಯಾಣಿಸುವಂತಾಗಿದೆ ಎಂಬ ಬಗ್ಗೆ ಬೇಸರ ವ್ಯಕ್ತಪಡಿಸಿತು.
25 ವರ್ಷದ ಯುವತಿ, ಆಕೆಯ ಪೋಷಕರು, ಮಹಿಳೆಯ ಸಂಗಾತಿಯ ಪೋಷಕರು ಸುಪ್ರೀಂಕೋರ್ಟ್ ನ್ಯಾಯಪೀಠದ ಮುಂದೆ ಖುದು ಹಾಜರಾಗಿದ್ದರು. ಪ್ರಕರಣದ ಸೂಕ್ಷ್ಮತೆಯ ದೃಷ್ಟಿಯಿಂದ ಪಕ್ಷಕಾರರೊಂದಿಗೆ ನ್ಯಾಯಪೀಠ ಪ್ರತ್ಯೇಕ ಕೊಠಡಿಗಳಲ್ಲಿ ಮಾತುಕತೆ ನಡೆಸಿತು.
ತ್ವರಿತ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್: ಮಹಿಳೆಗೆ ಸಿಕ್ಕಿತು ತಕ್ಷಣದ ರಿಲೀಫ್!
ನನಗೆ ನನ್ನ ಹೆತ್ತವರ ಬಗ್ಗೆ ಪ್ರೀತಿ, ಗೌರವ ಹಾಗೂ ಮಮತೆ ಇದೆ. ಆದರೂ, ನಾನು ದುಬೈಗೆ ಹಿಂತಿರುಗಿ ವೃತ್ತಿಜೀವನ ನಡೆಸುತ್ತೇನೆ ಎಂಬುದನ್ನು ಮಹಿಳೆ ನ್ಯಾಯಪೀಠದ ಮುಂದೆ ಸ್ಪಷ್ಟಪಡಿಸಿದರು. ಈಗಾಗಲೇ ಗೃಹ ಬಂಧನದ ಕಾರಣದಿಂದ ಈಗ ಇರುವ ಮೂರು ಉದ್ಯೋಗಾವಕಾಶಗಳನ್ನು ಕಳೆದುಕೊಂಡಿದ್ದೇನೆ ಎಂಬುದನ್ನೂ ಮಹಿಳೆ ವಿವರಿಸಿದರು.
ಮಹಿಳೆಯ ಇಚ್ಚೆಗೆ ನಮ್ಮ ವಿರೋಧವಿಲ್ಲ. ಆಕೆಯ ವೃತ್ತಿ ಜೀವನದ ಆಯ್ಕೆಗಳನ್ನೂ ನಾವು ವಿರೋಧಿಸುತ್ತಿಲ್ಲ. ಆಕೆ ಆರ್ಥಿಕವಾಗಿ ಸ್ಥಿರವಾಗಿರಬೇಕು ಮತ್ತು ಜೀವನದಲ್ಲಿ ಸುರಕ್ಷಿತವಾಗಿರಬೇಕು ಎಂಬುದೇ ನಮ್ಮ ಬಯಕೆ ಎಂದು ಮಹಿಳೆಯ ಪೋಷಕರು ನ್ಯಾಯಪೀಠಕ್ಕೆ ತಿಳಿಸಿದರು.
ಮಹಿಳೆ ಪ್ರಬುದ್ಧಳಾಗಿದ್ದು, ತನ್ನ ಜೀವನದ ಬಗ್ಗೆ ಸೂಕ್ತ ನಿರ್ಧಾರ ಮಾಡಲು ಸಮರ್ಥಳಿದ್ದಾಳೆ. ಹೀಗಾಗಿ, ಆಕೆಯನ್ನು ಗೃಹ ಬಂಧನದಲ್ಲಿ ಇಡುವುದು ಕಾನೂನು ಬಾಹಿರ. ಆಕೆಯ ಪಾಸ್‌ಪೋರ್ಟ್ ಸಹಿತ ಎಲ್ಲ ಅಗತ್ಯ ದಾಖಲೆಗಳನ್ನು 48 ಗಂಟೆಗಳಲ್ಲಿ ಆಕೆಗೆ ನೀಡಬೇಕು, ಆಕೆಗೆ ವಿದೇಶಕ್ಕೆ ತೆರಳಲು ಅಡ್ಡಿ ಮಾಡಬಾರದು ಮತ್ತು ಆಕೆಯನ್ನು ತಕ್ಷಣದಿಂದ ಅಕ್ರಮ ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ನ್ಯಾಯಪೀಠ ಪೋಷಕರಿಗೆ ಆದೇಶ ನೀಡಿತು.
ಗೃಹಬಂಧನ ಮುಂದುವರಿಸಿದರೆ ಪೋಷಕರ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರಕರಣ ಪ್ರಾರಂಭಿಸುವುದಾಗಿ ನ್ಯಾಯಪೀಠ ಎಚ್ಚರಿಕೆ ನೀಡಿ ಪ್ರಕರಣವನ್ನು ಜನವರಿ 22ರಂದು ಮುಂದೂಡಿತು.