ಪ್ರೊಬೇಟ್ ಎಂಡ್ ಸಕ್ಸೆಷನ್ (P & SC ) ಪ್ರಕರಣಗಳಲ್ಲಿ ಗರಿಷ್ಠ ಕೋರ್ಟ್ ಫೀ ಎಷ್ಟು?
ಪ್ರೊಬೇಟ್ ಎಂಡ್ ಸಕ್ಸೆಷನ್ (P & SC ) ಪ್ರಕರಣಗಳಲ್ಲಿ ಗರಿಷ್ಠ ಕೋರ್ಟ್ ಫೀ ಎಷ್ಟು?
P & SC. (ಪ್ರೊಬೇಟ್ ಎಂಡ್ ಸಕ್ಸೆಷನ್) ಪ್ರಕರಣಗಳಲ್ಲಿ ಪಾವತಿಸಬೇಕಾದ ಗರಿಷ್ಠ ನ್ಯಾಯಾಲಯ ಶುಲ್ಕ ಎಷ್ಟು?*
ಪ್ರೊಬೇಟ್; ಲೆಟರ್ ಆಫ್ ಅಡ್ಮಿನಿಸ್ಟ್ರೇಷನ್; ಮತ್ತು ಸಕ್ಸೇಶನ್ ಸರ್ಟಿಫಿಕೇಟ್ ಗಳನ್ನು ಪಡೆಯಲು ನ್ಯಾಯಾಲಯದಲ್ಲಿ ಪ್ರೊಬೇಟ ಎಂಡ್ ಸಕ್ಸೆಷನ್ (P&SC) ಪ್ರಕರಣಗಳನ್ನು ದಾಖಲು ಮಾಡುವ ವಿಷಯ ಎಲ್ಲರಿಗೂ ತಿಳಿದದ್ದೇ ಆಗಿದೆ. ಸದರಿ ಪ್ರಕರಣವು ಇತ್ಯರ್ಥವಾದ ಬಳಿಕ ವಾರೀಸು ಪ್ರಮಾಣಪತ್ರವನ್ನು ಯಾ ಪ್ರೊಬೇಟ್ ಅಥವಾ ಲೆಟರ್ ಆಫ್ ಅಡ್ಮಿನಿಸ್ಟ್ರೇಷನ್ ನನ್ನು ಅರ್ಜಿದಾರರಿಗೆ ನೀಡುವ ಮೊದಲು ನ್ಯಾಯಾಲಯದಲ್ಲಿ ನಿಗದಿತ ನ್ಯಾಯಾಲಯ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
ಯಾವ ರೂಪದಲ್ಲಿ ಎಷ್ಟು ನ್ಯಾಯಾಲಯ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ?
P & SC ಪ್ರಕರಣಗಳಲ್ಲಿ ಸ್ಟ್ಯಾಂಪ್ ಡ್ಯೂಟಿ ಅಂದರೆ ನಾನ್ ಜುಡಿಶಿಯಲ್ ಸ್ಟ್ಯಾಂಪ್ ಶುಲ್ಕವನ್ನು ಪಾವತಿ ಮಾಡಮಾಡಬೇಕು ಎಂಬ ತಪ್ಪು ಕಲ್ಪನೆ ಕೆಲವರಲ್ಲಿ ಇದೆ. ಆದರೆ ಪಿ ಎಂಡ್ ಎಸ್ಸಿ ಪ್ರಕರಣಗಳಲ್ಲಿ ಪಾವತಿ ಮಾಡುವ ಶುಲ್ಕವು ಕನಾ೯ಟಕ ಸ್ಟ್ಯಾಂಪ್ ಅಧಿನಿಯಮದಡಿ ಬರುವುದಿಲ್ಲ. ಬದಲಿಗೆ ಕರ್ನಾಟಕ ನ್ಯಾಯಾಲಯ ಶುಲ್ಕ ಮತ್ತು ದಾವೆಗಳ ಮೌಲ್ಯ ಮಾಪನ ಅಧಿನಿಯಮ 1958 ರ ಶೆಡ್ಯೂಲ್ 1 ಆರ್ಟಿಕಲ್ 6 ರ ಪ್ರಕಾರ ನ್ಯಾಯಾಲಯ ಶುಲ್ಕವನ್ನು (Court fee) ಪಾವತಿ ಮಾಡಬೇಕಾಗುತ್ತದೆ.
ದಿನಾಂಕ 27.4.2000 ರಂದು ಸದರಿ ನ್ಯಾಯಾಲಯ ಶುಲ್ಕ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು P&SC ಪ್ರಕರಣಗಳಲ್ಲಿ ಪಾವತಿಸಬೇಕಾದ ನ್ಯಾಯಾಲಯ ಶುಲ್ಕದ ಲೆಕ್ಕಾಚಾರ ಈ ಕೆಳಗಿನಂತಿದೆ.
Art.6 (a) ರೂ.1000/- ವರೆಗೆ ಯಾವುದೇ ಶುಲ್ಕ ಇಲ್ಲ.
ರೂ. 1000/- ದಿ೦ದ 300000/- ವರೆಗೆ 3% = ರೂ.8970/-
Art.6 (b)ರೂ.300000/- ಕ್ಕಿಂತ ಹೆಚ್ಚಿನ ಮೊತ್ತ - 5% ಗರಿಷ್ಟ ₹30000/-
ಮೇಲ್ಕಾಣಿಸಿದ ಲೆಕ್ಕಾಚಾರದಲ್ಲಿ ಕೆಲವರು ಗೊಂದಲಕ್ಕೀಡಾಗಿ ಪಾವತಿಸಬೇಕಾದ ಗರಿಷ್ಠ ನ್ಯಾಯಾಲಯ ಶುಲ್ಕ ₹30000/_ ಎಂಬ ನಿಷ್ಕರ್ಷೆಗೆ ಬಂದು ತಮ್ಮ ನಿಲುವಿಗೆ ದೃಢವಾಗಿ ಅಂಟಿ ಕೊಂಡಿರುವುದನ್ನು ಕಾಣಬಹುದು. ಈ ವಿಷಯದ ಬಗ್ಗೆ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿಗಳ ನಡುವೆ ಆಗಾಗ ಚರ್ಚೆ ನಡೆಯುವುದನ್ನು ನಾವು ಕಾಣಬಹುದು.
ಪಿ ಆಂಡ್ ಎಸ್‌ಸಿ ಪ್ರಕರಣಗಳಲ್ಲಿ ಪಾವತಿಸುವ ವಿಚಾರ ಸುಮಾರು 2 ದಶಕಗಳ ಹಿಂದೆಯೇ ಕರ್ನಾಟಕ ಹೈಕೋರ್ಟ್ ಮೆಟ್ಟಲೇರಿತ್ತು. ಆಗಿನ ನ್ಯಾ. ಆರ್. ವಿ. ರವೀಂದ್ರನ್ ಅವರ ನೇತೃತ್ವದ ನ್ಯಾಯಪೀಠವು ಈ ಸಮಸ್ಯೆಯನ್ನು ಇತ್ಯರ್ಥಗೊಳಿಸಿತು.
Probate C.P. 3/2000 ಈ ಪ್ರಕರಣದಲ್ಲಿ ಅರ್ಜಿದಾರರಾದ ಬಿ.ಜಿ.ಚೆರಿಯನ್ ಅವರ ಪರ ವಕೀಲರು P&SC ಪ್ರಕರಣಗಳಲ್ಲಿ ಪಾವತಿಸಬೇಕಾದ ಗರಿಷ್ಠ ನ್ಯಾಯಾಲಯ ಶುಲ್ಕ₹30000/-ಆಗಿರುತ್ತದೆ ಎಂಬ ವಾದವನ್ನು ಮಂಡಿಸಿದರು.
ಆದರೆ ಅರ್ಜಿದಾರರ ಪರ ವಕೀಲರ ವಾದವನ್ನು ಒಪ್ಪದ ಮಾನ್ಯ ಕರ್ನಾಟಕ ಹೈಕೋರ್ಟ್ ನ್ಯಾಯಪೀಠವು ಶೆಡ್ಯೂಲ್ 1 ಆರ್ಟಿಕಲ್ 6 (a) ಮತ್ತು (b) ಗಳನ್ನು ಜಾಗರೂಕತೆಯಿಂದ ಒಟ್ಟಾಗಿ ಓದಿದಲ್ಲಿ ಮಾತ್ರ ಪಾವತಿಸಬೇಕಾದ ಗರಿಷ್ಠ ಶುಲ್ಕ₹30000/- ಅಲ್ಲ; ಬದಲಿಗೆ ₹38970/- ಆಗಿರುತ್ತದೆ ಎಂಬ ನಿಷ್ಕರ್ಷೆಗೆ ಬರಲೇ ಬೇಕಾಗುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ದಿನಾಂಕ 8.12.2000 ದ೦ದು Probate C.P. 3/2000 ಪ್ರಕರಣದಲ್ಲಿ ನೀಡಿದ ಆದೇಶದ ಪ್ರತಿಯನ್ನು ರಾಜ್ಯದ ಎಲ್ಲಾ ಅಧೀನ ನ್ಯಾಯಾಲಯಗಳ ಅವಗಾಹನೆಗೆ ತರಬೇಕಾಗಿ ತೀರ್ಪಿನಲ್ಲಿ ಮಾನ್ಯ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಹಾಗಾಗಿ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ. P&SC. ಪ್ರಕರಣಗಳಲ್ಲಿ ಪಾವತಿಸಬೇಕಾದ ಗರಿಷ್ಠ ನ್ಯಾಯಾಲಯ ಶುಲ್ಕ ₹38970/- ಆಗಿರುತ್ತದೆ.
ಲೇಖನ: ಪ್ರಕಾಶ್ ನಾಯಕ್; ಶಿರಸ್ತೆದಾರರು; ನ್ಯಾಯಾಂಗ ಇಲಾಖೆ; ಮಂಗಳೂರು