NI Act Sec 138: ಮೇಲ್ಮನವಿ ವೇಳೆ ಅಪರಾಧಿ ಶೇ 20ಚೆಕ್ ಮೊತ್ತ ಇಡುವ ಕುರಿತು ನ್ಯಾಯಾಲಯದ ತೀರ್ಪಿಗೆ ಹೈಕೋರ್ಟ್ ತಡೆ
NI Act Sec 138: ಮೇಲ್ಮನವಿ ವೇಳೆ ಅಪರಾಧಿ ಶೇ 20ಚೆಕ್ ಮೊತ್ತ ಇಡುವ ಕುರಿತು ನ್ಯಾಯಾಲಯದ ತೀರ್ಪಿಗೆ ಹೈಕೋರ್ಟ್ ತಡೆ
ಎನ್ಐ ಆಕ್ಟ್ 138ರಡಿ ನೀಡಲಾದ ಶಿಕ್ಷೆಗೆ ಮೇಲ್ಮನವಿ ಸಲ್ಲಿಸುವಾಗ, ಆ ಅರ್ಜಿಯನ್ನು ಪರಿಗಣಿಸುವ ನ್ಯಾಯಾಲಯಗಳು ಯಾಂತ್ರಿಕವಾಗಿ ಪರಿಹಾರ ಮೊತ್ತದ ಶೇ. 20 ಯಾ ಚೆಕ್ ಮೊತ್ತದ ಠೇವಣಿ ನೀಡಲು ಷರತ್ತು ವಿಧಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾ. ಆನಂದ್ ವೆಂಕಟೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಶೇ. 20ರಷ್ಟು ಚೆಕ್ ಮೊತ್ತವನ್ನು ಠೇವಣಿ ಇಡಬೇಕು ಎಂಬ ನ್ಯಾಯಾಲಯದ ಆದೇಶದ ವಿರುದ್ಧ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಶಿಕ್ಷೆಯನ್ನು ಅಮಾನತ್ತಿನಲ್ಲಿ ಇಡುವ ಅರ್ಜಿಯ ವಿಚಾರಣೆ ನಡೆಸುವ ನ್ಯಾಯಾಲಯಕ್ಕೆ ಚೆಕ್ ಮೊತ್ತದ ಶೇ. 20ರಷ್ಟು ಮೊತ್ತದ ಹಣವನ್ನು ಠೇವಣಿ ನೀಡುವ ಕುರಿತು ಆದೇಶಿಸುವ ಅಧಿಕಾರವನ್ನು ಸೆಕ್ಷನ್ 148 ನೀಡುತ್ತದೆ. ಆದರೆ, ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳು ಯಾಂತ್ರಿಕವಾಗಿ ಕಾರ್ಯಾಚರಿಸಬಾರದು ಎಂದು ಅದು ಹೇಳಿದೆ.
ಸದ್ರಿ ಪ್ರಕರಣದಲ್ಲಿ ಅರ್ಜಿದಾರರು ಈಗಾಗಲೇ ನ್ಯಾಯಾಲಯದಲ್ಲಿ "ಆರ್ಥಿಕವಾಗಿ ದಿವಾಳಿ" ಅರ್ಜಿಯನ್ನು ಹಾಕಿದ್ದು, ಅದರ ವಿಚಾರಣೆ ನಡೆಯುತ್ತಿದೆ. ಈ ಪ್ರಕ್ರಿಯೆ ಇರುವ ಸಂದರ್ಭದಲ್ಲೇ ಅರ್ಜಿದಾರರ ವಿರುದ್ಧ ಶೇ. 20ರಷ್ಟು ಚೆಕ್ ಮೊತ್ತದ ಠೇವಣಿ ಇಡಬೇಕು ಎಂಬ ಮೇಲ್ಮನವಿ ನ್ಯಾಯಾಲಯದ ಆದೇಶ ಹೊರಡಿಸಿರುವುದನ್ನು ಹೈಕೋರ್ಟ್ ನ್ಯಾಯಪೀಠ ಗಮನಿಸಿತು.
ಹಾಗಿದ್ದರೂ, ದೂರುದಾರರು ಉದ್ದೇಶಪೂರ್ವಕವಾಗಿ ಆರೋಪಿತರು ನೀಡಿರುವ ಚೆಕ್‌ನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದರು. ಹಾಗಾಗಿ, ಸದ್ರಿ ಪ್ರಕರಣದಲ್ಲಿ ಚೆಕ್‌ನ್ನು ನಗದೀಕರಿಸಲು ಆರೋಪಿತರು ಯಾವುದೇ ಸಮ್ಮತಿಯನ್ನು ನೀಡಿಲ್ಲ ಎಂಬುದನ್ನು ನ್ಯಾಯಪೀಠಕ್ಕೆ ನಿವೇದಿಸಿಕೊಂಡರು.
ಜಂಬೂ ಭಂಡಾರಿ Vs ಎಂ.ಪಿ. ಸ್ಟೇಟ್ ಇಂಡಸ್ಟ್ರಿಯಲ್ ಡೆವೆಲಪ್‌ಮೆಂಟ್ ಕಾರ್ಪೊರೇಷನ್ ಲಿ. ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ಶೇ. 20ರ ಠೇವಣಿ ಕಡ್ಡಾಯ ನಿಯಮವಲ್ಲ ಎಂಬುದನ್ನು ಸ್ಟಷ್ಟಪಡಿಸಿತು.
ನೆಗೋಷಿಯಬಲ್ ಇನ್ಸ್‌ಟ್ರುಮೆಂಟ್ ಕಾಯ್ದೆಯ ಕಲಂ 138ರಡಿ ಅಪರಾಧಕ್ಕೆ ನೀಡಲಾದ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದಾಗ ಅಥವಾ ಶಿಕ್ಷೆಯ ಅಮಾನತು ಅಥವಾ ಜಾಮೀನು ಮಂಜೂರಿಗಾಗಿ ಅರ್ಜಿಯನ್ನು ಪರಿಗಣಿಸುವಾಗ ನ್ಯಾಯಾಲಯಗಳು ಯಾಂತ್ರಿಕವಾಗಿ ಪರಿಹಾರ ಮೊತ್ತದ ಶೇಕಡಾ 20ರಷ್ಟು ಯಾ ಚೆಕ್ ಮೊತ್ತವನ್ನು ಎನ್‌ಐ ಆಕ್ಟ್ ಕಲಂ 148ರಡಿ ಠೇವಣಿ ಇಡಲು ಷರತ್ತು ವಿಧಿಸಬಾರದು ಎಂದು ನ್ಯಾಯಪೀಠ ಹೇಳಿತು.
ಪ್ರಕರಣ: ಸಿ.ಆರ್. ಬಾಲಸುಬ್ರಹ್ಮಣ್ಯನ್ Vs ಪಿ. ಈಶ್ವರಮೂರ್ತಿ
ಮದ್ರಾಸ್ ಹೈಕೋರ್ಟ್ Crl.OP No. 947/2024 Dated 22-01-2024