ವಕೀಲರಿಗೆ ಸಿಹಿ ಸುದ್ದಿ: ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ ಶೀಘ್ರ ಜಾರಿ
ವಕೀಲರಿಗೆ ಸಿಹಿ ಸುದ್ದಿ: ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ ಶೀಘ್ರ ಜಾರಿ
ವಕೀಲರ ಮೇಲೆ ನಡೆಯುವ ದೌರ್ಜನ್ಯ ಮತ್ತು ಹಿಂಸಾಚಾರ ತಡೆಯಲು ಹಾಗೂ ವಕೀಲರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡುವ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ 2023 ಶೀಘ್ರವೇ ಜಾರಿಗೆ ಬರಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ ಬಜೆಟ್ ಭಾಷಣದಲ್ಲಿ ಈ ಬಗ್ಗೆ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದೆ.
ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧಯಕಕ್ಕೆ ಈಗಾಗಲೇ ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದು, ರಾಜ್ಯಪಾಲರ ಅನುಮೋದನೆಯೂ ದೊರೆತಿದೆ. ರಾಜ್ಯ ಪತ್ರದ ಅಧಿಸೂಚನೆಯಾದರೆ, ಈ ವಿಧೇಯಕ ಕಾನೂನಾಗಿ ಜಾರಿಗೆ ಬರಲಿದ್ದು, ವೃತ್ತಿನಿರತ ವಕೀಲರಿಗೆ ಕರ್ತವ್ಯದಲ್ಲಿ ಇರುವಾಗ ಸೂಕ್ತ ರಕ್ಷಣೆ ಸಿಗಲಿದೆ.
ಇದೆ ವೇಳೆ, ರೈತರು ಮತ್ತು ಆರ್ಥಿಕವಾಗಿ ದುರ್ಬಲ ವ್ಯಕ್ತಿಗಳಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಸಿವಿಲ್ ಪ್ರಕ್ರಿಯೆ ಸಂಹಿತೆ (ಕರ್ನಾಟಕ ತಿದ್ದುಪಡಿ) ಅಧಿನಿಯಮ 2023 ಅನ್ನು ಜಾರಿಗೆ ತರಲು ಕೂಡ ಕ್ರಮ ಕೈಗೊಳ್ಳಲಾಗಿದೆ.
ಹೈಕೋರ್ಟ್ ಮತ್ತು ಸಿವಿಲ್ ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಕಡಿಮೆಗೊಳಿಸಲು ಕರ್ನಾಟಕ ಹೈಕೋರ್ಟ್ ಕಾಯ್ದೆ ಮತ್ತು ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರಕಾರ ಮುಂದಾಗಿದೆ ಎಂದು ಸರ್ಕಾರ ವಿಧಾನಸಭೆಯಲ್ಲಿ ಪ್ರಕಟಿಸಿದೆ.
ವಕೀಲರ ಭವನ, ಕೋರ್ಟ್ ಕಾಂಪ್ಲೆಕ್ಸ್
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನೂತನ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಲು 12 ಕೋಟಿ ಅನುದಾನವನ್ನು ರಾಜ್ಯ ಬಜೆಟ್ ಘೋಷಿಸಿದೆ. ಪ್ರತ್ಯೇಕ ಕಟ್ಟಡದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಗೊಳ್ಳಲಿದೆ.
ಅದೇ ರೀತಿ, ಇದೀಗ ಅಪೂರ್ಣವಾಗಿರುವ ಮೈಸೂರಿನ ವಕೀಲರ ಭವನಕ್ಕೂ ಈ ಬಾರಿಯ ರಾಜ್ಯ ಬಜೆಟ್ ಸಾಕಷ್ಟು ಅನುದಾನವನ್ನು ನೀಡಲಾಗಿದ್ದು ಈ ವರ್ಷದಲ್ಲೇ ವಕೀಲರ ಭವನ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಸಿದ್ದರಾಮಯ್ಯ ಆಶ್ವಾಸನೆ ನೀಡಿದ್ದಾರೆ..