ವಿಮಾ ಕ್ಲೇಮ್ ನೀಡದ ಫ್ಯೂಚರ್ ಜನರಾಲಿ ವಿಮಾ ಕಂಪೆನಿಯ ಸೇವಾ ನ್ಯೂನ್ಯತೆ: ಭಾರೀ ದಂಡ, ಪರಿಹಾರದ ತೀರ್ಪು ನೀಡಿದ ರಾಜ್ಯ ಗ್ರಾಹಕರ ಆಯೋಗ
ವಿಮಾ ಕ್ಲೇಮ್ ನೀಡದ ಫ್ಯೂಚರ್ ಜನರಾಲಿ ವಿಮಾ ಕಂಪೆನಿಯ ಸೇವಾ ನ್ಯೂನ್ಯತೆ: ಭಾರೀ ದಂಡ, ಪರಿಹಾರದ ತೀರ್ಪು ನೀಡಿದ ರಾಜ್ಯ ಗ್ರಾಹಕರ ಆಯೋಗ
ವಿಮಾ ಕ್ಲೇಮುದಾರರು ಸಲ್ಲಿಸಿದ ಕ್ಲೇಮು ಅರ್ಜಿಯನ್ನು ತಿರಸ್ಕರಿಸಿದ ವಿಮಾ ಕಂಪೆನಿಗೆ ಭಾರೀ ಮೊತ್ತದ ದಂಡ ಮತ್ತು ಪರಿಹಾರ ನೀಡುವಂತೆ ತೀರ್ಪು ಮಾಡುವ ಮೂಲಕ ರಾಜ್ಯ ಗ್ರಾಹಕರ ಆಯೋಗ ವಿಮಾ ಕಂಪೆನಿಗೆ ಬಿಸಿ ಮುಟ್ಟಿಸಿದೆ.
ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ರವಿ ಕುಮಾರ್ ಮತ್ತು ಸುನೀತಾ ಸಿ. ಬಾಗೇವಾಡಿ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ.
ಶ್ರೀಮತಿ ವೀಣಾ ಅವರ ಪರ ನ್ಯಾಯವಾದಿ ಪ್ರಶಾಂತ್ ಟಿ. ಪಂಡಿತ್ ಅವರು ವಾದ ಮಂಡಿಸಿದ್ದರೆ, ಮೇಲ್ಮನವಿದಾರ ಫ್ಯೂಚರ್ ಜನರಾಲಿ ಇಂಡಿಯಾ ಇನ್ಶೂರೆನ್ಸ್ ಕಂಪೆನಿ ಪರವಾಗಿ ನ್ಯಾಯವಾದಿ ರಾಜೇಶ್ ಎಸ್. ಅವರು ವಾದ ಮಂಡಿಸಿದ್ದರು.
ವಿಮಾ ಮೊತ್ತ 45 ಲಕ್ಷ ರೂ.ಗಳನ್ನು ದಂಡನಾ ಬಡ್ಡಿ ಸಹಿತ ನೀಡುವಂತೆ ಆದೇಶ ನೀಡಿದ ರಾಜ್ಯ ಗ್ರಾಹಕರ ಆಯೋಗ, ವಿಮಾ ಕಂಪೆನಿಯ ಸೇವಾ ನ್ಯೂನ್ಯತೆಗಾಗಿ ಸಂತ್ರಸ್ತರಿಗೆ 4 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಅದೇಶ ನೀಡಿದೆ.
ಪ್ರಕರಣದ ವಿವರ:
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತಲಗೊಡ ಗ್ರಾಮದ ವೀಣಾ ಅವರು ಮೇಲ್ಮನವಿ ದಾರ ಸಂಸ್ಥೆಯಾದ ಫ್ಯೂಚರ್ ಜನರಾಲಿ ವಿಮಾ ಸಂಸ್ಥೆಯಿಂದ 2012ರಲ್ಲಿ ಅಪಘಾತ ಸುರಕ್ಷಾ ಪಾಲಿಸಿಯನ್ನು ಪಡೆದುಕೊಂಡಿದ್ದರು.
ದಿನಾಂಕ 6-09-2018ರಂದು 12 ಅಡಿಗಳ ಎತ್ತರದಿಂದ ಆಕಸ್ಮಿಕವಾಗಿ ಬಿದ್ದಿದ್ದರು. ಸರ್ಕಾರಿ ವೈದ್ಯರು ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದರೂ ಗಂಭೀರ ಗಾಯಗೊಂಡಿದ್ದ ಚೇತರಿಸಿಕೊಳ್ಳದ ಅವರು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೃದಯಾಘಾತದ ಪರಿಣಾಮ ಉಸಿರು ಕಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ ಎಂಬ ವರದಿಯನ್ನು ಆಧರಿಸಿದ ವಿಮಾ ಕಂಪೆನಿ, ಪಾಲಿಸಿದಾರರಿಗೆ ಡೆತ್ ಕ್ಲೇಮ್ ನೀಡಲು ನಿರಾಕರಿಸಿತ್ತು. ಮೃತರು ವಿಮಾ ಕಂಪೆನಿಗೆ ಮೃತರ ಆರೋಗ್ಯದ ಸಮಸ್ಯೆಯನ್ನು ಬಚ್ಚಿಟ್ಟಿದ್ದರು ಎಂದು ಅದು ಆರೋಪಿಸಿತ್ತು.
ಬಾಧಿತ ಪಾಲಿಸಿದಾರರಾದ ವೀಣಾ ಉತ್ತರ ಕನ್ನಡ ಜಿಲ್ಲಾ ಗ್ರಾಹಕರ ಆಯೋಗದ ಕದ ತಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ, 45 ಲಕ್ಷ ರೂ.ಗಳ ಮೊತ್ತದ ಪರಿಹಾರವನ್ನು ಶೇ. 6ರ ದಂಡನಾ ಬಡ್ಡಿಯೊಂದಿಗೆ ನೀಡಲು ವಿಮಾ ಕಂಪೆನಿಗೆ ನಿರ್ದೇಶನ ನೀಡಿತು.
ಇದನ್ನು ಪ್ರಶ್ನಿಸಿ ವಿಮಾ ಕಂಪೆನಿ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿತು.
ಅಪಘಾತ ಸುರಕ್ಷಾ ವಿಮಾ ಪಾಲಿಸಿ ಪಡೆದಿರುವುದಕ್ಕೆ ವಿಮಾ ಕಂಪೆನಿ ತಕರಾರು ಎತ್ತಿಲ್ಲ. ಅಪಘಾತ ನಡೆದ ಸಂದರ್ಭದಲ್ಲಿ ಮೃತ ವ್ಯಕ್ತಿ ಪಾಲಿಸಿಯ ಕವರೇಜ್ ಹೊಂದಿದ್ದರು ಎಂಬುದನ್ನು ಗಮನಿಸಿದ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, 45 ಲಕ್ಷ ರೂ.ಗಳ ಮೊತ್ತದ ಪರಿಹಾರವನ್ನು ಶೇ. 6ರ ದಂಡನಾ ಬಡ್ಡಿಯೊಂದಿಗೆ ನೀಡಲು ವಿಮಾ ಕಂಪೆನಿಗೆ ನಿರ್ದೇಶನ ನೀಡಿತು. ಜೊತೆಗೆ ನಾಲ್ಕು ಲಕ್ಷ ರೂ.ಗಳ ಪರಿಹಾರವನ್ನು ವಿಮಾ ಕಂಪೆನಿ ಸೇವಾ ನ್ಯೂನ್ಯತೆಗಾಗಿ ನೀಡಲು ಆಯೋಗ ಆದೇಶ ನೀಡಿತು.
ಮ್ಯಾನೇಜರ್, ಫ್ಯೂಚರ್ ಜನರಾಲಿ ಇಂಡಿಯಾ ಇನ್ಶೂರೆನ್ಸ್ ಕಂ Vs ಶ್ರೀಮತಿ ವೀಣಾ
ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, A.No: 454/2023 Dated 03-02-2024