ಭೌತಿಕ ಕಡತಗಳ ನಿರ್ವಹಣೆ ಸ್ಥಗಿತ: ಇನ್ನು ಮುಂದೆ ಇ-ಆಫೀಸ್ ಮೂಲಕವೇ ಕಂದಾಯ ಕಡತಗಳ ನಿರ್ವಹಣೆ
ಸಿಹಿ ಸುದ್ದಿ ನೀಡಿದ ಕಂದಾಯ ಇಲಾಖೆ: ಭೌತಿಕ ಕಡತಗಳ ನಿರ್ವಹಣೆ ಸ್ಥಗಿತ, ಇನ್ನು ಮುಂದೆ ಇ-ಆಫೀಸ್ ಮೂಲಕವೇ ಕಡತ ವಿಲೇವಾರಿ
- ಜನತೆಗೆ ಸಿಹಿ ಸುದ್ದಿ ನೀಡಿದ ಕಂದಾಯ ಇಲಾಖೆ
- ಭೌತಿಕ ಕಡತಗಳ ನಿರ್ವಹಣೆ ಸ್ಥಗಿತ
- ಇನ್ನು ಮುಂದೆ ಇ-ಆಫೀಸ್ ಮೂಲಕವೇ ಕಡತ ವಿಲೇವಾರಿ
- ಇ-ಆಫೀಸ್ ಬಳಸದ ಅಧಿಕಾರಿಗಳ ವಿರುದ್ಧ ಕ್ರಮ
- ಎಲ್ಲ ದಾಖಲೆ ಇ-ಆಫೀಸ್ ಮೂಲಕ ನೇರವಾಗಿ ನಾಗರಿಕರಿಗೆ ಲಭ್ಯ
ಇನ್ನು ಮುಂದೆ ಕಂದಾಯ ದಾಖಲೆಗಳಿಗೆ ಕಚೇರಿ ಅಲೆಯುವುದು ತಪ್ಪಲಿದೆ. ಕೇವಲ ಅರ್ಜಿ ಸಲ್ಲಿಸಿ ಒಂದಷ್ಟು ದಿನ ಕಾದರೆ ಸಾಕು. ಸೂಕ್ತ ಕಂದಾಯ ದಾಖಲೆ ನಿಮ್ಮ ಕೈಗೆ ಸುಲಭವಾಗಿ ಸಿಗಲಿದೆ.
ಏಕೆಂದರೆ, 2023ರ ಫೆಬ್ರವರಿಯಿಂದ ಕಂದಾಯ ಇಲಾಖೆಯಲ್ಲಿ ಭೌತಿಕ ಕಡತಗಳ ನಿರ್ವಹಣೆ ಸ್ಥಗಿತಗೊಳಿಸಲಾಗಿದ್ದು, ಇ-ಆಫೀಸ್ ತಂತ್ರಾಂಶದ ಮೂಲಕ ಆನ್‌ಲೈನ್‌ನಲ್ಲೇ ಕಂದಾಯ ದಾಖಲೆ ಕೋರಿ ಸಲ್ಲಿಸುವ ಅರ್ಜಿಗಳ ನಿರ್ವಹಣೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಸಚಿವರು, ಕಂದಾಯ ಸೇವೆಗಳಲ್ಲಿನ ವಿಳಂಬ ತಪ್ಪಿಸಲು ಮತ್ತು ಭ್ರಷ್ಟಾಚಾರಕ್ಕೆ ಆಸ್ಪದ ನೀಡಬಾರದು ಎಂಬುದಕ್ಕೆ ಈ ದೃಢ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದ್ಧಾರೆ.
ಅರ್ಜಿಗಳನ್ನು ಸೀನಿಯಾರಿಟಿ ಆಧಾರದಲ್ಲಿ ಕಡತಗಳನ್ನು ನಿರ್ವಹಣೆ ಮಾಡಲಾಗುವುದು. ಅರ್ಜಿ ಸ್ವೀಕಾರ ಮತ್ತು ಕಡತಗಳ ನಿರ್ವಹಣೆ ಮತ್ತು ವಿಲೇವಾರಿ ಪ್ರಕ್ರಿಯೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಪಾರದರ್ಶಕವಾಗಿ ನಿರ್ವಹಣೆ ಮಾಡಲಾಗುತ್ತದೆ.
ಇ-ಆಫೀಸ್ ತಂತ್ರಾಂಶ ಬಳಕೆ ಮಾಡದೆ ಭೌತಿಕ ಕಡತಗಳನ್ನು ವಿಲೇವಾರಿ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಇಲಾಖೆ ಎಚ್ಚರಿಸಿದೆ.
ಈಗಾಗಲೇ ಬಾಕಿ ಇರುವ ಎಲ್ಲ ಕಡತಗಳನ್ನು ಸ್ಕ್ಯಾನಿಂಗ್ ಮತ್ತು ಡಿಜಿಟಲೀಕರಣ ಮಾಡುವ ಕಾರ್ಯ ಎಲ್ಲ ಕಂದಾಯ ಇಲಾಖೆಯಲ್ಲಿ ನಡೆಯುತ್ತಿದೆ. ಇಲಾಖೆಯ ಪೋರ್ಟಲ್ ಮೂಲಕ ನಾಗರಿಕರು ತಮ್ಮ ದಾಖಲೆಗಳನ್ನು ನೇರವಾಗಿ ಪಡೆದುಕೊಳ್ಳಬಹುದಾದ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಇದರಿಂದ ನಾಗರಿಕು ತಮ್ಮ ದಾಖಲೆಗಳನ್ನು ನೇರವಾಗಿ ಇಲಾಖೆಯಿಂದಲೇ ಪಡೆದುಕೊಳ್ಳಬಹುದಾಗಿದೆ.