ಜಡ್ಜ್‌ಗಳ ಭ್ರಷ್ಟಾಚಾರ ಒಪ್ಪಲು ಸಾಧ್ಯವಿಲ್ಲ: ಭ್ರಷ್ಟಾಚಾರದಲ್ಲಿ ತೊಡಗಿದ್ದ ಜಡ್ಜ್ ವಜಾ ಆದೇಶ ಎತ್ತಿಹಿಡಿದ ಹೈಕೋರ್ಟ್
ಜಡ್ಜ್‌ಗಳ ಭ್ರಷ್ಟಾಚಾರವನ್ನು ಒಪ್ಪಲು ಸಾಧ್ಯವಿಲ್ಲ: ಭ್ರಷ್ಟಾಚಾರದಲ್ಲಿ ತೊಡಗಿದ್ದ ಜಡ್ಜ್ ವಜಾ ಆದೇಶ ಎತ್ತಿಹಿಡಿದ ಹೈಕೋರ್ಟ್
ಒಬ್ಬ ನ್ಯಾಯಾಂಗ ಅಧಿಕಾರಿಯನ್ನು ವಜಾಗೊಳಿಸಿರುವ ಆದೇಶ ಕಠಿಣವಾಗಿರಬಹುದು. ಆದರೆ ನಿರ್ಲಜ್ಜವಾಗಿ ಮತ್ತು ನಿರ್ದಾಕ್ಷಿಣ್ಯವಾಗಿ ಭ್ರಷ್ಟಾಚಾರದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗೆ ಯಾವುದೇ ರೀತಿಯ ಕರುಣೆ ತೋರಿಸಲು ಸಾಧ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ನ್ಯಾಯಾಧೀಶರೊಬ್ಬರ ವಜಾ ಆದೇಶವನ್ನು ಎತ್ತಿ ಹಿಡಿದಿದೆ.
2012 ರಿಂದ 2015ರ ನಡುವೆ ಗುಜರಾತ್‌ನ ವಾಪಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಅಜಯ್ ಆಚಾರ್ಯ ಅವರು ಭ್ರಷ್ಟಾಚಾರದಲ್ಲಿ ತೊಡಗಿರುವ ಘಟನೆಯ ದೃಶ್ಯಾವಳಿ ಗೌಪ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ತಮ್ಮ ಸಹೋದ್ಯೋಗಿ ಜೊತೆ ಸೇರಿ ಭ್ರಷ್ಟಾಚಾರದಲ್ಲಿ ತೊಡಗಿದ್ದ ನ್ಯಾಯಾಧೀಶರ ಕೃತ್ಯಗಳನ್ನು ಸ್ಥಳೀಯ ವಕೀಲ ಜಗತ್ ಪಟೇಲ್ ಮತ್ತು ಅಟೆಂಡರ್ ಆಗಿದ್ದ ಮನೀಶ್ ಪಟೇಲ್ ಎಂಬವರು ಗೌಪ್ಯ ಕ್ಯಾಮರಾದಲ್ಲಿ ಸೆರೆಹಿಡಿದಿದ್ದರು.
ಆ ಬಳಿಕ, ನ್ಯಾಯಾಧೀಶರಾದ ಅಜಯ್ ಆಚಾರ್ಯ ಅವರ ವಿರುದ್ಧ ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ಸಹಿತ ಸುಪ್ರೀಂ ಕೋರ್ಟಿಗೆ ದೂರು ಸಲ್ಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ವಿಚಾರಣೆಯ ಜವಾಬ್ದಾರಿಯನ್ನು ಗುಜರಾತ್ ಹೈಕೋರ್ಟಿಗೆ ನೀಡಿತ್ತು.
ಹೈಕೋರ್ಟ್‌ನ ವಿಜಿಲೆನ್ಸ್ ವಿಭಾಗದ ವಿಚಾರಣೆಯ ವೇಳೆ ನ್ಯಾಯಾಧೀಶ ಅಜಯ್ ಆಚಾರ್ಯ, ಕೆಲವರೊಂದಿಗೆ ಸೇರಿ ಭ್ರಷ್ಟಾಚಾರದಲ್ಲಿ ತೊಡಗಿದ್ದು ಕ್ರಿಮಿನಲ್ ಪ್ರಕರಣಗಳಲ್ಲಿನ ಸಾಕ್ಷಿದಾರರ ಹೇಳಿಕೆಗಳನ್ನು ತಮ್ಮ ಕಚೇರಿಯಲ್ಲೇ ಕುಳಿತು ಬರೆಸುತ್ತಿದ್ದು ಪತ್ತೆಯಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ನ್ಯಾಯಾಧೀಶ ಆಚಾರ್ಯ ಅವರ ಜೊತೆಗೆ ಮತ್ತೂಬ್ಬ ನ್ಯಾಯಾಧೀಶರನ್ನು ಬಂಧಿಸಲಾಗಿತ್ತು ವಿಚಾರಣೆಯ ಬಳಿಕ ಆರೋಪಿತ ನ್ಯಾಯಾಧೀಶ ಆಚಾರ್ಯ ಅವರನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿತ್ತು.
ತಮ್ಮನ್ನು ವಜಾ ಗೊಳಿಸಿದ ಈ ಆದೇಶವನ್ನು ಆಕ್ಷೇಪಿಸಿ ನ್ಯಾಯಾಧೀಶರಾದ ಆಚಾರ್ಯ ಗುಜರಾತ್ ಹೈಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದರು. ತಮ್ಮನ್ನು ವಜಾಗೊಳಿಸಿರುವ ಆದೇಶ ದೋಷಪೂರಿತವಾಗಿದೆ ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದರು.
ಪ್ರಕರಣದಲ್ಲಿನ ಸಾಕ್ಷಾಧಾರಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಮೂರ್ತಿ ಬೇರೇನ್ ವೈಷ್ಣವ್ ಮತ್ತು ನ್ಯಾಯಮೂರ್ತಿ ನಿಶಾ ಠಾಕೂರ್ ಅವರಿದ್ದ ವಿಭಾಗೀಯ ಪೀಠ ನ್ಯಾಯಾಂಗ ಅಧಿಕಾರಿಯಾಗಿ ಅರ್ಜಿದಾರರು ನ್ಯಾಯಾಲಯದ ನಿರೀಕ್ಷಿತ ಕರ್ತವ್ಯಗಳನ್ನು ಮಾಡುವಲ್ಲಿ ವಿಫಲರಾಗಿದ್ದಾರೆ ಮತ್ತು ನ್ಯಾಯಾಲಯದ ನಿರೀಕ್ಷೆಗಳನ್ನೇ ಸುಳ್ಳಾಗಿಸಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಾಂಗದಲ್ಲಿ ನಿರ್ಲಜ್ಜವಾಗಿ ಮತ್ತು ನಿರ್ಧಾಕ್ಷಿಣ್ಯವಾಗಿ ಭ್ರಷ್ಟಾಚಾರದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗೆ ಯಾವುದೇ ರೀತಿಯಲ್ಲಿ ಕರುಣೆ ತೋರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ಆಚಾರ್ಯ ಅವರು ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದೆ ಈ ಮೂಲಕ ನ್ಯಾಯಾಂಗ ಅಧಿಕಾರಿಯ ವಜಾ ಆದೇಶವನ್ನು ಎತ್ತಿ ಹಿಡಿದಿದೆ.