KPTCL: ತಾತ್ಕಾಲಿಕ ನೇಮಕಾತಿ ಆದೇಶ ನೀಡಿ- ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ
KPTCL: ತಾತ್ಕಾಲಿಕ ನೇಮಕಾತಿ ಆದೇಶ ನೀಡಿ- ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ
ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ (KPTCL) ನಲ್ಲಿ 404 ಸಹಾಯಕ ಎಂಜಿನಿಯರ್ ಹುದ್ದೆಗಳ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅರ್ಹ ಅಭ್ಯರ್ಥಿಗಳಿಗೆ ತಾತ್ಕಾಲಿಕ ನೇಮಕಾತಿ ಆದೇಶವನ್ನು ನೀಡುವಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಮಂಡ್ಯದ ಕೃಷ್ಣರಾಜ ಪೇಟೆ ತಾಲೂಕಿನ ಜಿ. ಶ್ರುತಿ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮತ್ತು ನ್ಯಾ. ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
2023ರ ಜನವರಿ 3ರಂದು ಪ್ರಕಟಿಸಿದ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಅಂಕಪಟ್ಟಿ ಪ್ರಕಾರ 404 ಅಭ್ಯರ್ಥಿಗಳಿಗೆ ತಾತ್ಕಲಿಕ ನೇಮಕಾತಿ ಆದೇಶ ನೀಡಿ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ನೇಮಕಾತಿಗಳು ಹೈಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ ಎಂದು ನೇಮಕಾತಿ ಆದೇಶದಲ್ಲಿ ನಮೂದಿಸಬೇಕು. ಒಂದೊಮ್ಮೆ ಮೇಲ್ಮನವಿ ಪುರಸ್ಕೃತಗೊಂಡು ಮೇಲ್ಮನವಿದಾರರು ಆಯ್ಕೆಯಾದರೆ ಸೇವಾ ಹಿರಿತನ ಮತ್ತು ರೋಸ್ಟರ್ ಪದ್ದತಿ ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನೇಮಕಾತಿ ಸಂಬಂಧಿಸಿದಂತೆ ಕೆಪಿಟಿಸಿಎಲ್ 2023ರ ಫೆಬ್ರವರಿ 4ರಂದು ಪ್ರಕಟಿಸಿದ್ದ ತಾತ್ಕಾಲಿಕ ಪಟ್ಟಿಯನ್ನು ಏಕಸದಸ್ಯ ಪೀಠ ರದ್ದುಗೊಳಿಸಿತ್ತು. ಈ ಪಟ್ಟಿಯಲ್ಲಿ ಅರ್ಹತೆ ಪಡೆದಿದ್ದ ಅಭ್ಯರ್ಥಿಗಳು ಮೇಲ್ಮನವಿ ಸಲ್ಲಿಸಿದ್ದರು.