ಅಧಿಕಾರಿಗಳ ಸಾಮೂಹಿಕ ವರ್ಗ: ಪ್ರತ್ಯೇಕ ಕಾರಣ ಅನಗತ್ಯ, ಕಡ್ಡಾಯವಲ್ಲ- ಕರ್ನಾಟಕ ಹೈಕೋರ್ಟ್
ಅಧಿಕಾರಿಗಳ ಸಾಮೂಹಿಕ ವರ್ಗ: ಪ್ರತ್ಯೇಕ ಕಾರಣ ಅನಗತ್ಯ, ಕಡ್ಡಾಯವಲ್ಲ- ಕರ್ನಾಟಕ ಹೈಕೋರ್ಟ್
ಅಧಿಕಾರಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರ ವರ್ಗಾವಣೆಗೂ ಪ್ರತ್ಯೇಕ ಕಾರಣ ನೀಡುವುದು ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾ. ಕೆ. ಸೋಮಶೇಖರ್ ಮತ್ತು ನ್ಯಾ. ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿದ್ದ ಎಚ್.ಎಸ್. ವೀಣಾ ಮತ್ತು ಇತರರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.
ಸರ್ಕಾರದಲ್ಲಿ ವರ್ಗಾವಣೆ ಮಾಡಬಹುದಾದ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ತಾವು ಬಯಸಿದ ಹುದ್ದೆಯಲ್ಲಿ ದೀರ್ಘ ಕಾಲ ಉಳಿದುಕೊಳ್ಳುವ ಹಕ್ಕು ಹೊಂದಿರುವುದಿಲ್ಲ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಒಂದು ವೇಳೆ, ಸುದೀರ್ಘ ಕಾಲ ಒಂದೇ ಹುದ್ದೆಯಲ್ಲಿ ಒಂದೇ ಕಡೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಲ್ಲಿ ಸ್ಥಳೀಯವಾಗಿ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಮತ್ತು ಪಟ್ಟಭದ್ರ ಹಿತಾಸಕ್ತಿಗೆ ಒತ್ತು ನೀಡುವ ಸಾಧ್ಯತೆಗಳು ಇರುತ್ತವೆ. ಇದಕ್ಕೆ ಸರಕಾರ ಕೂಡ ಅವಕಾಶ ನೀಡಬಾರದು. ನಿಗದಿತ ಅವಧಿಗಿಂತಲೂ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಮುಂದುವರಿಸಲು ಅವಕಾಶ ನೀಡಬಾರದು ಎಂದು ನ್ಯಾಯಪೀಠ ಗಮನಿಸಿತು.
ಮುಖ್ಯಮಂತ್ರಿಗಳ ಪೂರ್ವಾನುಮತಿ ಪಡೆಯದೇ ಅರ್ಜಿದಾರರನ್ನು ವರ್ಗಾವಣೆ ಮಾಡಲಾಗಿದೆ ಎಂಬುದಾಗಿ ಅರ್ಜಿದಾರರು ವಾದಿಸಿದ್ದರು. ಈ ವಾದವನ್ನು ತಳ್ಳಿ ಹಾಕಿದ ನ್ಯಾಯಪೀಠ, ಅರ್ಜಿದಾರರ ದಾಖಲೆಗಳನ್ನು ಪರಿಶೀಲಿಸಿದಾಗ ಒಂದೇ ಸ್ಥಳದಲ್ಲಿ ಒಂದಲ್ಲ ಒಂದು ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವುದು ಕಂಡುಬಂದಿದೆ ಎಂದು ಗಮನಿಸಿದೆ.
ಅರ್ಜಿದಾರರ ವರ್ಗಾವಣೆಗೆ ಕಾರಣ ನಿಗದಿಪಡಿಸುವುದು ಕಷ್ಟಕರ. ಅರ್ಜಿದಾರರನ್ನು ವರ್ಗಾವಣೆ ಮಾಡುವುದಕ್ಕೆ ಕಾರಣ ನೀಡಲೇಬೇಕು ಎಂಬುದು ಅನಿವಾರ್ಯವಲ್ಲ ಎಂದು ನ್ಯಾಯಪೀಠ ತೀರ್ಪು ನೀಡಿದೆ.
ಪ್ರಕರಣ: ವೀಣಾ ಎಚ್.ಎಸ್. Vs ಕರ್ನಾಟಕ ಸರ್ಕಾರ
ಕರ್ನಾಟಕ ಹೈಕೋರ್ಟ್, WP 24786/2023, Dated 22-01-2024