ಜಾತಿರಹಿತ, ಧರ್ಮರಹಿತ ಪ್ರಮಾಣಪತ್ರ ನೀಡಲು ಕಂದಾಯ ಅಧಿಕಾರಿಗಳಿಗೆ ಅಧಿಕಾರವಿಲ್ಲ: ಹೈಕೋರ್ಟ್
ಜಾತಿರಹಿತ, ಧರ್ಮರಹಿತ ಪ್ರಮಾಣಪತ್ರ ನೀಡಲು ಕಂದಾಯ ಅಧಿಕಾರಿಗಳಿಗೆ ಅಧಿಕಾರವಿಲ್ಲ: ಹೈಕೋರ್ಟ್
ಜಾತಿ ರಹಿತ ಅಥವಾ ಧರ್ಮ ರಹಿತ ಪ್ರಜೆ ಎಂಬ ಪ್ರಮಾಣ ಪತ್ರ ನೀಡಲು ಜಿಲ್ಲಾಡಳಿತಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ. ಎಸ್.ಎಂ. ಸುಬ್ರಹ್ಮಣ್ಯಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ. ತಮಗೆ ಜಾತಿ ರಹಿತ - ಧರ್ಮ ರಹಿತ ಪ್ರಜೆ ಎಂಬ ಪ್ರಮಾಣ ಪತ್ರ ನೀಡುವಂತೆ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಬೇಕು ಎಂದು ತಿರುಪತ್ತೂರು ನಿವಾಸಿ ಸಂತೋಷ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಪೀಠ ಈ ತೀರ್ಪು ನೀಡಿದೆ.
ಇಂತಹ ಯಾವುದೇ ಪ್ರಮಾಣ ಪತ್ರ ನೀಡುವ ಶಾಸನ ಬದ್ಧ ಅಧಿಕಾರ ರಾಜ್ಯದ ಕಂದಾಯ ಅಧಿಕಾರಿಗಳಿಗೆ ಇಲ್ಲ. ಅದೇ ರೀತಿ, ಕಂದಾಯ ಅಧಿಕಾರಿಗಳಿಗೆ ಇಂತಹ ನಿರ್ದೇಶನ ನೀಡಲು ಸಂವಿಧಾನದ 226ನೇ ಅಡಿಯಲ್ಲಿ ಹೈಕೋರ್ಟ್ ತನ್ನ ಅಸಾಧಾರಣ ಅಧಿಕಾರ ವ್ಯಾಪ್ತಿ ಚಲಾಯಿಸುವಂತಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಸ್ಪಷ್ಟಪಡಿಸಿತು.
ಅರ್ಜಿದಾರರ ಆಶಯವನ್ನು ಸ್ವಾಗತಿಸಿದ ಮದ್ರಾಸ್ ಹೈಕೋರ್ಟ್ ನ್ಯಾಯಪೀಠ, ದೇಶದ ಅಭಿವೃದ್ಧಿಗೆ ಪೂರಕವಾಗಿ ಉತ್ತಮ ನಾಗರಿಕನಾಗಿರುವುದೇ ದೇಶಕ್ಕೆ ನೀಡುವ ದೊಡ್ಡ ಕೊಡುಗೆಯಾಗಿದೆ. ಸಂವಿಧಾನದ 51ನೇ ವಿಧಿಯಡಿ ಸೂಚಿಸಲಾದ ಮೂಲಭೂತ ಕರ್ತವ್ಯವೂ ಆಗಿದೆ ಎಂದು ಶ್ಲಾಘಿಸಿತು.
ಜಾತಿ ರಹಿತ-ಧರ್ಮ ರಹಿತ ಪ್ರಜೆ ಎಂಬ ಪ್ರಮಾಣ ಪತ್ರ ನೀಡಲು ತಹಶೀಲ್ದಾರ್‌ಗೆ ಅಥವಾ ಜಿಲ್ಲಾಧಿಕಾರಿಗೆ ಕಾನೂನು ಯಾವುದೇ ಅಧಿಕಾರ ನೀಡಿಲ್ಲ. ಹಾಗಾಗಿ, ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿ ಹಾಗೆ ಪ್ರಮಾಣ ಪತ್ರ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಇದೇ ವೇಳೆ, ಜಾತಿ ರಹಿತ ಅಥವಾ ಧರ್ಮ ರಹಿತ ಪ್ರಜೆ ಎಂಬ ಪ್ರಮಾಣ ಪತ್ರ ಪಡೆಯುವ ಅರ್ಜಿದಾರರ ಆಕಾಂಕ್ಷೆ ಪ್ರಶಂಸನೀಯ ಎಂದು ನ್ಯಾಯಪೀಠ ಅರ್ಜಿದಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು.
ಪ್ರಕರಣ: ಎಚ್. ಸಂತೋಷ್ Vs ಡಿಸ್ಟ್ರಿಕ್ಟ್ ಕಲೆಕ್ಟರ್
ಮದ್ರಾಸ್ ಹೈಕೋರ್ಟ್, WP 1290/2024, Dated 22-01-2024