ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಶಿಕ್ಷಕರಿಬ್ಬರು ಆರೋಪ ಮುಕ್ತ- ಹೈಕೋರ್ಟ್ ತೀರ್ಪು
ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಶಿಕ್ಷಕರಿಬ್ಬರು ಆರೋಪ ಮುಕ್ತ- ಹೈಕೋರ್ಟ್ ತೀರ್ಪು
ಬೆಂಗಳೂರಿನ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಶಿಕ್ಷಕಿಯರಿಬ್ಬರನ್ನು ಕರ್ನಾಟಕ ಹೈಕೋರ್ಟ್ ಆರೋಪಮುಕ್ತಗೊಳಿಸಿ ಆದೇಶ ನೀಡಿದೆ.
ಬೆಂಗಳೂರಿನ ಲಕ್ಕಸಂದ್ರದ ಮೇರಿ ಇಮ್ಯಾಕ್ಯುಲೇಟ್ ಹೈಸ್ಕೂಲ್ ಶಾಲಾ ಮುಖ್ಯ ಶಿಕ್ಷಕಿ ಎ.ಸಿ. ಮರಿಯಾ ಲೈಲಾ ಮತ್ತು ಶಿಕ್ಷಕಿ ಫಿಲೋಮಿನಾ ಅವರು ಸಲ್ಲಿಸಿದ್ದ ಕ್ರಿಮಿನಲ್ ರಿವಿಷನ್ ಪಿಟಿಷನ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಜಿ. ಬಸವರಾಜು ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಶಿಕ್ಷಕರು ಭವ್ಯ ಭಾರತದ ಶಿಲ್ಪಿಗಳು. ಉತ್ತಮ ಪ್ರಜೆಗಳನ್ನು ನಿರ್ಮಿಸುವ ಹೊಣೆಗಾರಿಕೆ ಅವರಿಗಿದೆ. ವಿದ್ಯಾರ್ಥಿಗಳನ್ನು ಬೈಯುವುದು, ಖಂಡಿಸುವುದನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಹೇಳಲಾಗದು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಘಟನೆ ವಿವರ
2014ರ ಮಾರ್ಚ್ 18ರಂದು ಇಬ್ಬರು ವಿದ್ಯಾರ್ಥಿನಿಯರು ಬೆಂಗಳೂರಿನ ಸ್ಯಾಂಕಿ ಟ್ಯಾಂಕ್‌ನ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿದ್ಯಾರ್ಥಿನಿಯೊಬ್ಬರ ಬ್ಯಾಗ್‌ನಲ್ಲಿದ್ದ ಡೆತ್ ನೋಟ್ ಲಭ್ಯವಾಗಿದ್ದು, ಇದರದಲ್ಲಿ ಶಿಕ್ಷಕರ ಕಿರುಕುಳವೇ ತಮ್ಮ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿತ್ತು.
ಈ ಬಗ್ಗೆ ವಿದ್ಯಾರ್ಥಿನಿಯರ ಹೆತ್ತವರು ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಪಟ್ಟಿಯನ್ನೂ ಸಲ್ಲಿಸಿದ್ದರು.
ಈ ಮಧ್ಯೆ, ತಮ್ಮನ್ನು ಪ್ರಕರಣದಿಂದ ಕೈಬಿಡಬೇಕು ಎಂದು ಮನವಿ ಮಾಡಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾನ್ಯಾಯಾಲಯ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.