ಪೊಲೀಸ್ ಠಾಣೆಗಳು ವ್ಯಾಪಾರಿ ಕೇಂದ್ರಗಳಾಗಿವೆ ಎಂದ ಕೋರ್ಟ್: ಇನ್ಸ್‌ಪೆಕ್ಟರ್‌ಗೆ ಜಾಮೀನು ನಕಾರ
ಪೊಲೀಸ್ ಠಾಣೆಗಳು ವ್ಯಾಪಾರಿ ಕೇಂದ್ರಗಳಾಗಿವೆ ಎಂದ ಕೋರ್ಟ್: ಇನ್ಸ್‌ಪೆಕ್ಟರ್‌ಗೆ ಜಾಮೀನು ನಕಾರ
ಪೊಲೀಸ್ ಠಾಣೆಗಳು ಭ್ರಷ್ಟಾಚಾರದ ಆಗರವಾಗಿದೆ, ವ್ಯಾಪಾರಿ ಕೇಂದ್ರಗಳಾಗಿ ಪರಿವರ್ತನೆ ಆಗಿದೆ. ಇದನ್ನು ನಿಲ್ಲಿಸದಿದ್ದರೆ, ಇದು ಖಂಡಿತವಾಗಿಯೂ ಸವಾಲಾಗಿ ಪರಿಣಮಿಸುತ್ತದೆ ಮತ್ತು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಲೋಕಾಯುಕ್ತ ಪ್ರಕರಣಗಳ ವಿಶೇಷ ನ್ಯಾಯಾಲಯ ಹೇಳಿದ್ದು, ಕೆಆರ್ ಪುರಂ ಪೊಲೀಸ್ ಇನ್ಸ್‌ಪೆಕ್ಟರ್ ವಜ್ರಮುನಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಜಾಮೀನು ಪಡೆಯುವವರೆಗೂ ಆರೋಪಿಯನ್ನು ಬಂಧಿಸದೇ ಇರಲು ರೂ. 50,000/- ಲಂಚ ಪಡೆಯುತ್ತಿದ್ದಾಗ ಇನ್ಸ್‌ಪೆಕ್ಟರ್ ವಜ್ರಮುನಿ ಅವರನ್ನು ಬಂಧಿಸಲಾಗಿತ್ತು.
ಪೊಲೀಸ್ ಠಾಣೆಗಳಲ್ಲಿ ಈಗ ಇರುವ ಪರಿಸ್ಥಿತಿ ಸಾಮಾನ್ಯ ಜನರಿಗೆ ವ್ಯವಸ್ಥೆಯ ಮೇಲೆ ಇರುವ ನಂಬಿಕೆ ಕಳೆದುಹೋಗುವಂತೆ ಆಗುತ್ತಿದೆ. ಇಂತಹ ಆರೋಪಿಗಳಿಗೆ ಜಾಮೀನು ನೀಡಿದರೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ. ಆರೋಪಿ ಪೊಲೀಸರಿಗೆ ತನಿಖೆಗೆ ಅಡ್ಡಿಯಾಗುವ ಸಾಧ್ಯತೆಯೂ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುವ ವರೆಗೆ ಮತ್ತು ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವವರೆಗೆ ಇನ್ಸ್‌ಪೆಕ್ಟರ್‌ನ ಕಸ್ಟಡಿ ವಿಚಾರಣೆ ಅಗತ್ಯ ಎಂದು ನ್ಯಾಯಾಲಯ ಪರಿಗಣಿಸಿತು.
ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಕೆ.ಆರ್.ಪುರಂ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎನ್. ರಮ್ಯಾ ಅವರು ಗರ್ಭಿಣಿ ಮತ್ತು ಕೆಲವು ಆರೋಗ್ಯ ಸಮಸ್ಯೆಗಳಿಗೆ ಕಾರಣಕ್ಕೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಘಟನೆಯ ವಿವರ
ಮಾರ್ಚ್ 12ರಂದು ರಮ್ಯಾ ಆರೋಪಿ ದಂಪತಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಅವರ ಪರ ವಕೀಲರು ಠಾಣೆಗೆ ಭೇಟಿ ನೀಡಿದಾಗ, ನಿರೀಕ್ಷಣಾ ಜಾಮೀನು ಪಡೆಯುವವರೆಗೂ ಅವರನ್ನು ಬಂಧಿಸಿದಂತೆ ರಮ್ಯಾ 5 ಲಕ್ಷ ರೂ. ಲಂಚ ಕೇಳಿದ್ದರು. ಆರೋಪಿ 2 ಲಕ್ಷ ರೂ. ನೀಡಲು ಒಪ್ಪಿಕೊಂಡಿದ್ದು, ಅದರಲ್ಲಿ ತನ್ನ ಪಾಲು 50 ಸಾವಿರ ರೂ. ಕಳೆದು ಉಳಿದ ಮೊತ್ತವನ್ನು ಇನ್ಸ್‌ಪೆಕ್ಟರ್ ವಜ್ರಮುನಿಗೆ ಕೊಡಬೇಕಿತ್ತು.
ಆರೋಪಿ ರಮ್ಯಾ ದಂಪತಿಯಿಂದ ಎರಡು ಖಾಲಿ ಚೆಕ್‌ಗಳನ್ನು ತೆಗೆದುಕೊಂಡಳು. ನಂತರ ವಾಟ್ಸ್ಯಾಪ್ ಕರೆ ಮಾಡಿದ್ದ ವಜ್ರಮುನಿ ವಕೀಲರಿಂದ ಮೂರು ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಅವರು ಈ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡಿದ್ದರು.
ಮಾರ್ಚ್ 14ರಂದು ವಕೀಲರಿಂದ ತಲಾ 50 ಸಾವಿರ ರೂ. ಪಡೆದ ವಜ್ರಮುನಿ ಮತ್ತು ರಮ್ಯಾ ಅವರನ್ನು ಪೊಲೀಸರು ಬಲೆಗೆ ಕೆಡವಿ ಬಂಧಿಸಿದ್ದರು.