ನಿವೃತ್ತ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಬಿಜೆಪಿ ಅಭ್ಯರ್ಥಿ: ವಿವಾದಿತ ತೀರ್ಪುಗಳ ಸರದಾರನಿಂದ ಮತಬೇಟೆ ಆರಂಭ
ನಿವೃತ್ತ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಬಿಜೆಪಿ ಅಭ್ಯರ್ಥಿ: ವಿವಾದಿತ ತೀರ್ಪುಗಳ ಸರದಾರನಿಂದ ಮತಬೇಟೆ ಆರಂಭ
ಸದಾ ವಿವಾದಗಳಿಂದಲೇ ಸುದ್ದಿ ಮಾಡಿದ್ದ ಕೊಲ್ಕೊತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರನ್ನು ಲೋಕಸಭಾ ಚುನಾವಣೆಯ ಆಖಾಡಕ್ಕೆ ಬಿಜೆಪಿ ಇಳಿಸಿದೆ. ಪಶ್ಚಿಮ ಬಂಗಾಳದ ಮೇದಿನಿಪುರದ ತಮ್‌ಲುಕ್ ಕ್ಷೇತ್ರದಿಂದ ಅಭಿಜಿತ್ ಮತಬೇಟೆ ನಡೆಸಲಿದ್ದಾರೆ.
ಅಭಿಜಿತ್ ಈ ಬಾರಿ ತೃಣಮೂಲ ಕಾಂಗ್ರೆಸ್‌ನ ಯುವ ನಾಯಕ ದೆಬಾಂಗ್ಸು ಭಟ್ಟಾಚಾರ್ಯ ಅವರನ್ನು ಎದುರಿಸಲಿದ್ದಾರೆ.
2009 ಮತ್ತು 2014ರಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಸುವೇಂದು ಅಧಿಕಾರಿ (ಈಗ ಬಿಜೆಪಿಯಲ್ಲಿದ್ದಾರೆ) ಅವರನ್ನು ಈ ಕ್ಷೇತ್ರ ಆರಿಸಿ ಲೋಕಸಭೆಗೆ ಕಳುಹಿಸಿತ್ತು. 2016ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅವರು ರಾಜೀನಾಮೆ ನೀಡಿದ್ದರು. ಆ ಬಳಿಕ ಅವರ ಸಹೋದರ ದಿವ್ಯೇಂದು ಅಧಿಕಾರಿ ಈ ಕ್ಷೇತ್ರದಲ್ಲಿ 2016 ಮತ್ತು 2019ರಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದರು.
ಕಳೆದ ಮಾರ್ಚ್ 5ರಂದು ನ್ಯಾ. ಅಭಿಜಿತ್ ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿ ನ್ಯಾಯಾಂಗ ಕ್ಷೇತ್ರದಿಂದ ನಿವೃತ್ತಿ ಹೊಂದಿದ್ದರು.
ಕೊಲ್ಕತ್ತಾದ ಮತ್ತೊಬ್ಬ ನ್ಯಾಯಮೂರ್ತಿ ಸೌಮೇನ್ ಸೆನ್ ಅವರು ರಾಜ್ಯದ ರಾಜಕೀಯ ಪಕ್ಷವೊಂದರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದ ಗಂಗೋಪಾಧ್ಯಾಯ, ವಿವಾದಿತ ಹಾಗೂ ಏಕಪಕ್ಷೀಯ ತೀರ್ಪುಗಳ ಮೂಲಕ ಸದಾ ಸುದ್ದಿಯಲ್ಲಿದ್ದರು.
ವಿಭಾಗೀಯ ಅಥವಾ ವಿಸ್ತೃತ ನ್ಯಾಯಪೀಠದ ಆದೇಶಗಳ ಉಲ್ಲಂಘನೆ/ನಿರ್ಲಕ್ಷ್ಯ, ಸುದ್ದಿವಾಹಿನಿಗಳ ಜೊತೆ ಚರ್ಚೆ, ಸುದ್ದಿಗೋಷ್ಠಿ, ಕೋರ್ಟ್ ರಿಜಿಸ್ಟ್ರಿಗೆ ಆದೇಶ ನೀಡುವ ಮೂಲಕ ನ್ಯಾಯಾಂಗ ಶಿಸ್ತಿನ ಮಾನದಂಡಗಳನ್ನು ಪದೇ ಪದೇ ಉಲ್ಲಂಘಿಸಿದ ಆರೋಪಗಳಿಂದ ಅಭಿಜಿತ್ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
ವಿಭಾಗೀಯ ಪೀಠದ ಆದೇಶ ಉಲ್ಲಂಘಿಸಿದ್ದ ನ್ಯಾ. ಅಭಿಜಿತ್ ಅವರ ಆದೇಶದ ಘಟನೆಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದ ಎಲ್ಲ ಘಟನೆಗಳ ವಿಚಾರಣೆಯನ್ನು ಸುಪ್ರೀಂ ನ್ಯಾಯಪೀಠಕ್ಕೆ ವರ್ಗಾಯಿಸಿಕೊಂಡಿತ್ತು ಎಂಬುದನ್ನು ಇಲ್ಲಿ ನೆನಪಿಸಬಹುದು.