ಅನುಕಂಪದ ನೌಕರಿ: ಅತ್ತೆಯ ನೌಕರಿ ಸೊಸೆಗೂ ಕೊಡಬಹುದು- ಅಲಹಾಬಾದ್ ಹೈಕೋರ್ಟ್ ತೀರ್ಪು
ಅನುಕಂಪದ ನೌಕರಿ: ಅತ್ತೆಯ ನೌಕರಿ ಸೊಸೆಗೂ ಕೊಡಬಹುದು- ಅಲಹಾಬಾದ್ ಹೈಕೋರ್ಟ್ ತೀರ್ಪು
ಸೊಸೆಯನ್ನು ಮಗಳಂತೆ ಪರಿಗಣಿಸಬಹುದು. ಅದೇ ರೀತಿ, ಅನುಕಂಪದ ನೌಕರಿಗೆ ಆಕೆಯನ್ನೂ ಪರಿಗಣಿಸಬಹುದು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಸೊಸೆ ಕುಟುಂಬದ ಅವಿಭಾಜ್ಯ ಅಂಗವಾಗಿದ್ದು, ಮಗಳಂತೆ ಪರಿಗಣಿಸಬಹುದು. ಮೃತರ ಪುತ್ರ ಶೇ 75ರಷ್ಟು ಅಂಗವೈಕಲ್ಯದಿಂದ ಬಳಲುತ್ತಿರುವುದನ್ನು ಪರಿಗಣಿಸಿ ಅತ್ತೆಯ ನೌಕರಿಯನ್ನು ಸೊಸೆಗೆ ಅನುಕಂಪದ ನೆಲೆಯಲ್ಲಿ ನೀಡಬಹುದು ಎಂದು ಆದೇಶಿಸಿದೆ.
ನ್ಯಾ. ವಿವೇಕ್ ಕುಮಾರ್ ಬಿರ್ಲಾ ಮತ್ತು ನ್ಯಾ. ಡಿ. ರಮೇಶ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಭಾರತೀಯ ಸಮಾಜದ ಪದ್ಧತಿಯ ಪ್ರಕಾರ, ಸೊಸೆಯನ್ನು ಸಹ ಮಗಳಂತೆ ಪರಿಗಣಿಸಬೇಕು. ಏಕೆಂದರೆ, ಅವಳು ಮದುವೆಯಾಗಿ ಹೋದ ಆ ಕುಟುಂಬದ ಅವಿಭಾಜ್ಯ ಅಂಗವಾಗಿದ್ದಾಳೆ. ಅನುಕಂಫದ ನೌಕರಿ ನೀಡುವುದರ ಉದ್ದೇಶ ಮರಣ ಹೊಂದಿದ ಸರ್ಕಾರಿ ನೌಕರನ ಅವಲಂಬಿತರಿಗೆ ಉದ್ಯೋಗದ ಮೂಲಕ ಆರ್ಥಿಕ ಪ್ರಯೋಜನವನ್ನು ವಿಸ್ತರಿಸುವುದಾಗಿದೆ. ಹೀಗಾಗಿ, ಅನುಕಂಪದ ನೇಮಕಾತಿಯನ್ನು ಸೊಸೆಗೂ ನೀಡಬಹುದು ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ವಿವರ
2022ರಲ್ಲಿ ಸರ್ಕಾರಿ ನೌಕರಿಯಲ್ಲಿ ಇದ್ದ ಅತ್ತೆ ಸಾವನ್ನಪ್ಪಿದ್ದರು. ಅದಕ್ಕೂ ಮುನ್ನ 2019ರಲ್ಲಿ ಮೃತ ಸರ್ಕಾರಿ ನೌಕರರ ಪುತ್ರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಶೆ. 75ರಷ್ಟು ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಪತಿಯ ದೈಹಿಕ ನ್ಯೂನ್ಯತೆಗೆ ಸಿಲುಕಿದ್ದರಿಂದ ಮತ್ತು ಅತ್ತೆಯ ನಿಧನದಿಂದ ಕುಟುಂಬದ ನಿರ್ವಹಣೆಯ ಹೊಣೆ ಸೊಸೆಯ ಹೆಗಲೇರಿತ್ತು.
ಅತ್ತೆಯ ಸಾವಿನ ಹಿನ್ನೆಲೆಯಲ್ಲಿ ಸೊಸೆ ಅನುಕಂಪದ ನೌಕರಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಇಲಾಖೆ ಅನುಕಂಪದ ನೌಕರಿ ನೀಡುವ ಕಾಯ್ದೆಯಡಿ ಸೊಸೆಗೆ ಅನುಕಂಪದ ನೌಕರಿ ನೀಡಲಾಗದು. ಏಕೆಂದರೆ ಸೊಸೆ ಕುಟುಂಬ ವ್ಯಾಪ್ತಿಯಲ್ಲಿ ಸೇರಿಸಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಬಾಧಿತ ಸೊಸೆ ಹೈಕೋರ್ಟ್ ಮೆಟ್ಟಿಲೇರಿದ್ದರು.