ನಿರಂತರ ಕಿರುಕುಳದ ಆರೋಪ: ಸಿಜೆಎಂ ಜಡ್ಜ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು
ನಿರಂತರ ಕಿರುಕುಳದ ಆರೋಪ: ಸಿಜೆಎಂ ಜಡ್ಜ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು
ತನಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚೀಫ್ ಜುಡೀಷಿಯಲ್ ಮ್ಯಾಜಸ್ಟ್ರೇಟ್ ವಿರುದ್ಧ ಮಹಿಳಾ ನ್ಯಾಯಾಧೀಶರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ ಘಟನೆ ಕೇರಳದಲ್ಲಿ ನಡೆದಿದೆ.
ಹೈಕೋರ್ಟ್ ಮೆಟ್ಟಿಲೇರಿದವರು ಕೊಟ್ಟಾಯಂನ ಪ್ರಥಮ ದರ್ಜೆ-II ನ್ಯಾಯಾಲಯದ ಮಹಿಳಾ ನ್ಯಾಯಾಂಗ ಅಧಿಕಾರಿ ಟಿಯಾರಾ ರೋಸ್ ಮೇರಿ. ಸದ್ಯ ಅವರು ರಜೆಯ ಮೇಲೆ ತೆರಳಿದ್ದಾರೆ. ರಜೆಗೆ ತೆರಳುವ ಮುನ್ನ ಅವರು, ಕೊಟ್ಟಾಯಂನ ತನ್ನ ಮೇಲಾಧಿಕಾರಿಯಾಗಿರುವ ಮುಖ್ಯ ನ್ಯಾಯಿಕ ದಂಡಾಧಿಕಾರಿ (CJM) ವಿವೀಜಾ ಸೇತುಮೋಹನ್ ತಮಗೆ 'ನಿರಂತರ ಕಿರುಕುಳ' ಎಂದು ಆರೋಪಿಸಿದ್ದಾರೆ.
ತಮಗೆ ವೈಯಕ್ತಿಕವಾಗಿ ಹಾಗೂ ವೃತ್ತಿಪರ ಮಟ್ಟದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಮೇರಿ ಆರೋಪಿಸಿದ್ದಾರೆ. ಹೈಕೋರ್ಟ್ ಮೆಟ್ಟಿಲೇರುವ ಮುನ್ನ ಅವರು ನ್ಯಾಯಾಂಗ ಅಧಿಕಾರಿಗಳ ಕುಂದು ಕೊರತೆಗಳನ್ನು ಬಗೆಹರಿಸುವ ಜವಾಬ್ದಾರಿಯುತ ಸಮಿತಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
15 ಪುಟಗಳ ಪತ್ರ ಬರೆದಿರುವ ಮೇರಿ, ತಮ್ಮ ಮೇಲಾಧಿಕಾರಿಯಾಗಿರುವ ಸಿಜೆಎಂ ರವರು ಅನಗತ್ಯ ಒತ್ತಡ, ಸಿಬ್ಬಂದಿ ಹಂಚಿಕೆಯಲ್ಲಿ ಪಕ್ಷಪಾತದ ಕ್ರಮಗಳು ಮತ್ತು ಅಸಮಂಜಸವಾದ ಬೇಡಿಕೆಗಳು ಇಟ್ಟಿರುತ್ತಾರೆ. ಇದು ತಮ್ಮ ಮೇಲೆ ಅಪರಿಮಿತ ಭಾವನಾತ್ಮಕ ಒತ್ತಡವನ್ನು ಸೃಷ್ಟಿಸಿದೆ. ಇದರಿಂದಾಗಿ, ತಮ್ಮ ಭ್ರೂಣದ ಆರೋಗ್ಯ ಮತ್ತು ದೈಹಿಕ ಸುರಕ್ಷತೆಯ ಬಗ್ಗೆ ಕಳವಳ ಉಂಟುಮಾಡಿದೆ ಎಂದು ಆರೋಪಿಸಿದ್ದಾರೆ.
ಈ ಸಮಸ್ಯೆ ಇತ್ಯರ್ಥವಾಗುವವರೆಗೆ ಹುದ್ದೆಯಿಂದ ದೂರವಿರಲು ಮೇರಿ ನಿರ್ಧರಿಸಿದ್ದಾರೆ. ಮಾರ್ಚ್ 1 ರಿಂದ ರಜೆಯಲ್ಲಿದ್ದು, ಮೇ 10 ರವರೆಗೆ ರಜೆ ವಿಸ್ತರಿಸಲಿದ್ದಾರೆ ಎಂದು ಹೇಳಲಾಗಿದೆ.
ದೂರಿನ ಸ್ವೀಕೃತಿಯನ್ನು ದೃಢಪಡಿಸಿದ ಹೈಕೋರ್ಟ್ ಮೂಲಗಳು, ಜಿಲ್ಲಾ ಉಸ್ತುವಾರಿ ನ್ಯಾಯಾಧೀಶರು ಶೀಘ್ರದಲ್ಲೇ ಈ ವಿಷಯವನ್ನು ಕೈಗೆತ್ತಿಕೊಳ್ಳಲಿದ್ದಾರೆ ಮತ್ತು ಸಂಬಂಧಿಸಿದ ಸಿಜೆಎಂನಿಂದ ವಿವರಣೆಯನ್ನು ಕೇಳಲಾಗುವುದು ಎಂದು ಹೇಳಿದರು.
ನ್ಯಾಯಾಂಗ ಅಧಿಕಾರಿಗಳ ಕುಂದುಕೊರತೆಗಳನ್ನು ಪರಿಹರಿಸುವ ಜವಾಬ್ದಾರಿಯುತ ಸಮಿತಿಯು ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ಅದರ ಅಧ್ಯಕ್ಷರನ್ನಾಗಿ ಹೊಂದಿದೆ ಮತ್ತು ಹೈಕೋರ್ಟ್‌ನ ಇತರ ಇಬ್ಬರು ನ್ಯಾಯಾಧೀಶರು, ಅಡ್ವೊಕೇಟ್ ಜನರಲ್ ಮತ್ತು ಇತರರನ್ನು ಒಳಗೊಂಡಿರುತ್ತದೆ.