"ಚುನಾವಣಾ ಬಾಂಡ್" ವಿಶ್ವದ ದೊಡ್ಡ ಹಗರಣ: ಹಣಕಾಸು ಸಚಿವೆ ನಿರ್ಮಲಾ ಪತಿ ಪರಕಾಲ ಪ್ರಭಾಕರ ಹೇಳಿಕೆ ಸೃಷ್ಟಿಸಿದೆ ಭಾರೀ ವಿವಾದ!
"ಚುನಾವಣಾ ಬಾಂಡ್" ವಿಶ್ವದ ದೊಡ್ಡ ಹಗರಣ: ಹಣಕಾಸು ಸಚಿವೆ ನಿರ್ಮಲಾ ಪತಿ ಪರಕಾಲ ಪ್ರಭಾಕರ ಹೇಳಿಕೆ ಸೃಷ್ಟಿಸಿದೆ ಭಾರೀ ವಿವಾದ!
ಚುನಾವಣಾ ಬಾಂಡ್ ಈಗ ಇಡೀ ದೇಶದಲ್ಲಿ ಚರ್ಚೆಯಾಗುತ್ತಿರುವ ವಿಷಯ. ಇದು ಈಗ ಬಿಜೆಪಿ ನಿಯಂತ್ರಣದಿಂದ ಹೊರಬಂದಿದ್ದು, ಬಿಜೆಪಿಯ ಕೊರಳಿಗೆ ಬಿಗಿಯಾಗಿ ಸುತ್ತಿಕೊಳ್ಳುತ್ತಿದೆ ಎಂದು ರಾಜಕೀಯ ಅರ್ಥಿಕ ತಜ್ಞ ಪರಕಾಲ ಪ್ರಭಾಕರ್ ಹೇಳಿದ್ದಾರೆ.
ಆರ್ಥ ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲ ಎಬ್ಬಿಸಿದೆ.
ಚುನಾವಣಾ ಬಾಂಡ್ ವಿಷಯ ಹಗರಣಗಳ ಹಗರಣ. ಈ ಹಗರಣದ ಕಾರಣದಿಂದ ಮೋದಿಯ ವಿರುದ್ಧ ದೇಶದ ಜನತೆ ತಿರುಗಿ ಬೀಳಲಿದ್ದಾರೆ ಎಂದು ಅವರು ವಿಶ್ಲೇಷಿಸಿದ್ದಾರೆ. ಮಲಯಾಳಂ ಚಾನೆಲ್ "ರಿಪೋರ್ಟರ್"ಗೆ ಸಂದರ್ಶನ ನೀಡಿದ ಅವರು, "ನನ್ನ ಅಭಿಪ್ರಾಯದಲ್ಲಿ ಚುನಾವಣಾ ಬಾಂಡ್ ಈಗ ಇಡೀ ದೇಶದಲ್ಲಿ ಬಹು ಚರ್ಚಿತ ವಿಷಯ. ಈ ಬಾರಿಯ ಚುನಾವಣಾ ಹೋರಾಟ ಮೋದಿ ಮತ್ತು ಭಾರತದ ಉಳಿದ ಜನರ ನಡುವೆ ನಡೆಯಲಿದೆ" ಎಂದು ಅವರು ಹೇಳಿದ್ದಾರೆ.
ಚುನಾವಣಾ ಬಾಂಡ್ ಹಗರಣ ಬಹಳ ಮೊತ್ತದ ಹಗರಣವಾಗಿದೆ. ಇದು ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಸದ್ದು ಮಾಡುತ್ತಿದೆ. ಇದು ಇಡೀ ವಿಶ್ವದ ಅತಿ ದೊಡ್ಡ ಹಗರಣ ಎಂದು ಪರಕಾರ ಪ್ರಭಾಕರ್ ಅವರು ಬಣ್ಣಿಸಿದ್ದಾರೆ.
ಈ ಹಗರಣದ ತೀವ್ರತೆ ನಿಧಾನವಾಗಿ ಜನಸಾಮಾನ್ಯರನ್ನು ತಲುಪುತ್ತಿದೆ. ಅವರಿಗೂ ಈ ಬೃಹತ್ ಹಗರಣದ ಆಳ ಅಗಲ ಅರ್ಥವಾಗುತ್ತಿದೆ. ಹೀಗಾಗಿ, ಈ ಬಾರಿಯ ಚುನಾವಣೆ ಜನಸಾಮಾನ್ಯ Vs ಮೋದಿ ಆಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಬಿಜೆಪಿ ಸರ್ಕಾರದಿಂದ ಆರ್ಥಿಕ ತಾರತಮ್ಯ
ಇಷ್ಟೇ ಅಲ್ಲದೆ, ಬಿಜೆಪಿ ಸರ್ಕಾರವು ಇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳ ಜೊತೆಗೆ ಆರ್ಥಿಕ ತಾರತಮ್ಯದ ಧೋರಣೆ ಅನುಸರಿಸುತ್ತಿದೆ. ಹಣ ನೀಡಲು ಕುಂಟು ನೆಪಗಳನ್ನು ಹೇಳುತ್ತಿದೆ ಎಂದು ಪ್ರಭಾಕರ್ ಅಭಿಪ್ರಾಯಪಟ್ಟಿದ್ಧಾರೆ.
ಬಿಜೆಪಿ ಆಡಳಿತದಲ್ಲಿ ಇಲ್ಲದ ರಾಜ್ಯಗಳಿಗೆ ಅದು ಆರ್ಥಿಕ ಅನ್ಯಾಯ ಎಸಗುತ್ತಿದೆ. ದೊಡ್ಡ ಮೊತ್ತದ ಹಣವನ್ನು ಸೆಸ್ ಮತ್ತು ಸರ್‌ಚಾರ್ಜ್ ಮೂಲಕ ಸಂಗ್ರಹ ಮಾಡುತ್ತಿದ್ದರೂ ಅದನ್ನು ರಾಜ್ಯಗಳಿಗೆ ಮರಳಿ ನೀಡುತ್ತಿಲ್ಲ. ಸುಮಾರು 40 ಲಕ್ಷ ಕೋಟಿ ರೂ.ಗಳಷ್ಟು ಹಣವನ್ನು ಮೋದಿ ಸರ್ಕಾರ ಸಂಗ್ರಹಿಸಿದೆ. ಆದರೆ, ಹಣಕಾಸು ಆಯೋಗದ ನೆಪದಲ್ಲಿ ರಾಜ್ಯಗಳಿಗೆ ನೀಡದೆ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ಇದೇ ಕಾರಣಕ್ಕೆ ಕೇರಳ, ತಮಿಳುನಾಡು ಮತ್ತು ಕರ್ನಾಟಕ ಅನುದಾನದ ಅನ್ಯಾಯದ ಆರೋಪ ಮಾಡಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ ಎಂಬುದನ್ನು ಅವರು ನೆನಪಿಸಿದರು.