ಚುನಾವಣಾ ಬಾಂಡ್: SBIಗೆ ಭಾರೀ ಮುಖಭಂಗ- ನಾಳೆಯೊಳಗೆ ಸಂಪೂರ್ಣ ಮಾಹಿತಿ ನೀಡಲು ಸುಪ್ರೀಂ ಕೋರ್ಟ್ ನಿರ್ದೇಶನ
ಚುನಾವಣಾ ಬಾಂಡ್: SBIಗೆ ಭಾರೀ ಮುಖಭಂಗ-
ನಾಳೆಯೊಳಗೆ ಸಂಪೂರ್ಣ ಮಾಹಿತಿ ನೀಡಲು ಸುಪ್ರೀಂ ಕೋರ್ಟ್ ನಿರ್ದೇಶನ
ಮಹತ್ವದ ವಿದ್ಯಮಾನವೊಂದರಲ್ಲಿ ಚುನಾವಣಾ ಬಾಂಡ್
ಬಗ್ಗೆ ವರದಿ ನೀಡಲು ಕಾಲಾವಕಾಶ ಕೋರಿ ಸಲ್ಲಿಸಿದ್ದ ಭಾರತೀಯ ಸ್ಟೇಟ್ ಬ್ಯಾಂಕಿನ ಮನವಿಯನ್ನು ತಿರಸ್ಕರಿಸಿದ
ಸುಪ್ರೀಂ ಕೋರ್ಟ್ ಮಾರ್ಚ್ 12ರ ಒಳಗೆ ಸಂಪೂರ್ಣ ಮಾಹಿತಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್,
ನ್ಯಾ. ಸಂಜೀವ್ ಖನ್ನಾ, ನ್ಯಾ. ಬಿ.ಆರ್. ಗವಾಯಿ, ನ್ಯಾ. ಜೆ.ಬಿ. ಪರ್ದೀವಾಲಾ ಮತ್ತು ನ್ಯಾ. ಮನೋಜ್
ಮಿಶ್ರಾ ಅವರಿದ್ದ ಪಂಚ ಸದಸ್ಯರ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಪ್ರಜಾಸತ್ತಾತ್ಮಕ ಸುಧಾರಣಾ ಒಕ್ಕೂಟ, ಕಾಮನ್
ಕಾಸ್, ಮತ್ತು ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಾರ್ಟಿ ಸಲ್ಲಿಸಿದ್ದ ನ್ಯಾಯಾಂಗ ನಿಂದನಾ ಅರ್ಜಿಯ ಜೊತೆಗೆ
ಎಸ್.ಬಿ.ಐ. ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿದೆ.
ಬ್ಯಾಂಕಿನ ಪರವಾಗಿ ವಾದಿಸಿದ ಹಿರಿಯ ವಕೀಲ
ಹರೀಶ್ ಸಾಳ್ವೆ, ಚುನಾವಣಾ ಬಾಂಡ್ ಗಳ ಮಾಹಿತಿಯನ್ನು ಕಲೆ ಹಾಕುವಲ್ಲಿ ಉಂಟಾಗಿರುವ ಸಮಸ್ಯೆಗಳನ್ನು
ವಿವರಿಸಿದರು. ನಮಗೆ ಕೊಂಚ ಕಾಲಾವಕಾಶ ಬೇಕು ಎಂದು ಮನವಿ ಮಾಡಿದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ,
ಮ್ಯಾಚಿಂಗ್ ಕಾರ್ಯಾಚರಣೆ ಮಾಡುವುದು ಬೇಡ. ನಿಮ್ಮಲ್ಲಿರುವ ಮಾಹಿತಿಯನ್ನು ನ್ಯಾಯಪೀಠದ ಮುಂದೆ ಹಾಜರುಪಡಿಸಿ.
ನಮಗೆ ಬೇಕಾಗಿರುವುದು ಮಾಹಿತಿ ಮಾತ್ರ ಎಂದು ಕಟು ಶಬ್ಧಗಳಲ್ಲಿ ತಿಳಿಸಿತು.
ಕೆವೈಸಿ ಮಾಹಿತಿಯಂತೆ ನಿಮ್ಮಲ್ಲಿ ಎಲ್ಲ ಅಗತ್ಯ
ಮಾಹಿತಿ ಇದೆ. ನೀವು ದೇಶದ ನಂಬರ್ ವನ್ ಬ್ಯಾಂಕರ್. ನಾನು ನಿಮ್ಮಿಂದ ನಿಗದಿಪಡಿಸಿದ ಕಾಲಮಿತಿಯಲ್ಲಿ
ವರದಿ ನೀಡುವಿರೆ ಎಂಬ ನಿರೀಕ್ಷೆ ಇದೆ ಎಂದು ನ್ಯಾಯಪೀಠ ಹೇಳಿತು.