-->
ಸ್ಥಿರಾಸ್ತಿಯನ್ನು ಜಪ್ತಿಪಡಿಸಿ ಮಾರಾಟ ಮಾಡಿ ಬಂದ ಹಣದಲ್ಲಿ ಡಿಕ್ರಿಯ ಸಂಪೂರ್ಣ ಸಮಾಧಾನದ ಪ್ರಕ್ರಿಯೆ ಕುರಿತು ಮಾಹಿತಿ

ಸ್ಥಿರಾಸ್ತಿಯನ್ನು ಜಪ್ತಿಪಡಿಸಿ ಮಾರಾಟ ಮಾಡಿ ಬಂದ ಹಣದಲ್ಲಿ ಡಿಕ್ರಿಯ ಸಂಪೂರ್ಣ ಸಮಾಧಾನದ ಪ್ರಕ್ರಿಯೆ ಕುರಿತು ಮಾಹಿತಿ

ಸ್ಥಿರಾಸ್ತಿಯನ್ನು ಜಪ್ತಿಪಡಿಸಿ ಮಾರಾಟ ಮಾಡಿ ಬಂದ ಹಣದಲ್ಲಿ ಡಿಕ್ರಿಯ ಸಂಪೂರ್ಣ ಸಮಾಧಾನದ ಪ್ರಕ್ರಿಯೆ ಕುರಿತು ಮಾಹಿತಿ





ನ್ಯಾಯಾಲಯವು ನೀಡಿದ ಡಿಕ್ರಿಯನ್ನು ಸಮಾಧಾನ ಪಡಿಸಲು ಡಿಕ್ರಿಧಾರಕನು (Decree Holder) ಅಮಲ್ಜಾರಿ ಅರ್ಜಿ (Execution Petition) ಸಲ್ಲಿಸಿ ಸಾಮಾನ್ಯವಾಗಿ ಮೂರು ವಿಧಗಳ ಪರಿಹಾರವನ್ನು ಕೋರುತ್ತಾರೆ.


ಮೊದಲನೆಯದು ತೀರ್ಪುಋಣಿಯ(Judgemet Debtor) ಸ್ಥಿರ ಅಥವಾ ಚರಾಸ್ತಿಯನ್ನು ಜಪ್ತಿಪಡಿಸಿ ಮಾರಾಟ ಮಾಡಿ ಬಂದ ಹಣದಲ್ಲಿ ಡಿಕ್ರಿ ಪ್ರಕಾರ ತನಗೆ ಸಲ್ಲತಕ್ಕ ಹಣವನ್ನು ಪಡೆಯುವುದು.


ಎರಡನೆಯದು ತೀರ್ಪುಋಣಿಯ ವೇತನವನ್ನು ಜಪ್ತಿಪಡಿಸಿ ಡಿಕ್ರಿ ಪ್ರಕಾರ ತನಗೆ ಸಲ್ಲತಕ್ಕ ಹಣವನ್ನು ಪಡೆಯುವುದು. ಮೂರನೆಯದು ತೀರ್ಪುಋಣಿಯನ್ನು ಬಂಧಿಸಿ ಡಿಕ್ರಿ ಪ್ರಕಾರ ತನಗೆ ಸಲ್ಲತಕ್ಕ ಹಣವನ್ನು ಪಡೆಯುವುದು.


ತೀರ್ಪುಋಣಿಯ ಸ್ಥಿರಾಸ್ತಿಯನ್ನು ಜಪ್ತಿಪಡಿಸಿ ಸಾರ್ವಜನಿಕ ಬಹಿರಂಗ ಹರಾಜಿನಲ್ಲಿ ಸದರಿ ಸ್ಥಿರಾಸ್ತಿಯನ್ನು ಮಾರಾಟ ಮಾಡಿ ಡಿಕ್ರಿಯ ಹಣವನ್ನು ವಸೂಲು ಪಡೆಯುವ ಪ್ರಕ್ರಿಯೆಯ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.


ಅಮಲ್ಜಾರಿ ಅರ್ಜಿಯನ್ನು ನ್ಯಾಯಾಲಯವು ತೀರ್ಪು ನೀಡಿದ ಎರಡು ವರ್ಷಗಳ ಒಳಗೆ ದಾಖಲು ಮಾಡಿದ್ದಲ್ಲಿ ತೀರ್ಪುಋಣಿಗೆ ಅಮಲ್ಜಾರಿ ಪ್ರಕರಣದ ನೋಟಿಸ್ ನೀಡುವ ಅವಶ್ಯಕತೆ ಇರುವುದಿಲ್ಲ. ನೇರವಾಗಿ ನ್ಯಾಯಾಲಯದ ಮುಖಾಂತರ ತೀರ್ಪುಋಣಿಯ ಸ್ಥಿರಾಸ್ತಿಯನ್ನು ಜಪ್ತಿ ಪಡಿಸಬಹುದು. ಈ ಉದ್ದೇಶಕ್ಕೆ ತೀರ್ಪುಋಣಿಯ ಹೆಸರಿನಲ್ಲಿರುವ ಸ್ಥಿರಾಸ್ತಿಗೆ ಸಂಬಂಧಪಟ್ಟ ಖಾತೆ ಯಾ ಪಹಣಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.


ತೀರ್ಪಿಗೆ ಮೊದಲು ಸ್ಥಿರಾಸ್ತಿ ಜಪ್ತಿ ಆಗಿದ್ದಲ್ಲಿ ಅಥವಾ ದಾವೆಗೆ ಮೊದಲೇ ಸ್ಥಿರಾಸ್ತಿಯನ್ನು ವಾದಿಗೆ ಅಡಮಾನ ಮಾಡಿದ್ದಲ್ಲಿ ಅಮಲ್ಜಾರಿ ಅರ್ಜಿಯಲ್ಲಿ ಮತ್ತೊಮ್ಮೆ ಸ್ಥಿರಾಸ್ತಿಯನ್ನು ಜಪ್ತಿ ಮಾಡುವ ಅವಶ್ಯಕತೆ ಇರುವುದಿಲ್ಲ. ನೇರವಾಗಿ ಸ್ಥಿರಾಸ್ತಿ ಮಾರಾಟ ಪ್ರಕ್ರಿಯೆ ಪ್ರಾರಂಭಿಸಬಹುದು.


ಸ್ಥಿರಾಸ್ತಿ ಜಪ್ತಿ ಆದ ಬಳಿಕ ನ್ಯಾಯಾಲಯದ ಮುಖಾಂತರ ತೀರ್ಪುಋಣಿಗೆ ಮಾರಾಟದ ನೋಟಿಸ್ (Sale Notice) ಕಳುಹಿಸಬೇಕು. ಸದರಿ ಮಾರಾಟ ನೋಟಿಸಿಗೆ ಆಕ್ಷೇಪ ಸಲ್ಲಿಸಲು ತೀರ್ಪುಋಣಿಗೆ ಕಾಲಾವಕಾಶ ನೀಡಲಾಗುವುದು.


ತೀರ್ಪುಋಣಿಯು ಡಿಕ್ರಿಯನ್ನು ಸಮಾಧಾನ ಪಡಿಸಲು ವಿಫಲನಾದಲ್ಲಿ ಮುಂದಿನ ಹಂತ ಮಾರಾಟ ಪತ್ರಗಳ ಸಲ್ಲಿಕೆ. ಸ್ಥಿರಾಸ್ತಿಗೆ ಸಂಬಂಧಪಟ್ಟ ಖಾತೆ, ಋಣಭಾರ ಪ್ರಮಾಣ ಪತ್ರ, ಸ್ಥಿರಾಸ್ತಿಯ ಎಲ್ಲಾ ವಿವರಗಳನ್ನು ಒಳಗೊಂಡ ಪ್ರಮಾಣ ಪತ್ರ ಸಲ್ಲಿಸಬೇಕು. ಮಾರಾಟ ಪತ್ರಗಳನ್ನು ಪರಿಶೀಲಿಸಿದ ನ್ಯಾಯಾಲಯವು ಇಸ್ತಿಹಾರ್ನಾಮೆಯನ್ನು (Proclamation) ಹೊರಡಿಸುವುದು.


ಇಸ್ತಿಹಾರ್ ನಾಮೆಯನ್ನು ಸ್ಥಿರಾಸ್ತಿ ಹರಾಜಿನ 15 ದಿನಗಳ ಮುಂಚಿತವಾಗಿ ಹೊರಡಿಸಬೇಕು. ಇದರಲ್ಲಿ ಜಪ್ತಿ ಪಡಿಸಲಾದ ಆಸ್ತಿಗೆ ಸಂಬಂಧಪಟ್ಟಂತೆ ಗ್ರಾಮದ ಹೆಸರು, ಸರ್ವೆ ನಂಬರ್, ಕಟ್ಟಡಗಳ ಮೌಲ್ಯ, ಆಸ್ತಿಯ ಬಾಜಾರು ಧಾರಣೆ, ಪ್ರಥಮವಾಗಿ ಏಲಂ ಕರೆಯುವ ಮೊತ್ತ, ಆಸ್ತಿಯ ಚಕ್ಕುಬಂದಿ ಇತ್ಯಾದಿ ಎಲ್ಲಾ ವಿವರಗಳನ್ನು ಅಫಿದಾವಿತ್ ಮೂಲಕ ನೀಡಬೇಕು. ಜೊತೆಗೆ ಸ್ಥಿರಾಸ್ತಿ ಇರುವ ಜಾಗದಲ್ಲಿ ಬಹಿರಂಗ ಹರಾಜು ನಡೆಯುವ ದಿನಾಂಕ ಹಾಗೂ ತೆರೆದ ನ್ಯಾಯಾಲಯದಲ್ಲಿ ಹರಾಜು ನಡೆಯುವ ದಿನಾಂಕಗಳನ್ನು ನಮೂದಿಸಬೇಕು. ಇದರ ಪ್ರತಿಗಳನ್ನು ನ್ಯಾಯಾಲಯದ ಸೂಚನಾ ಫಲಕಕ್ಕೆ, ಹರಾಜು ಮಾಡುವ ಸ್ಥಳಕ್ಕೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಕಂದಾಯ ಕಚೇರಿಗೆ ಕಳುಹಿಸಬೇಕು. ನ್ಯಾಯಾಲಯದ ಬೇಲೀಫರು ಸ್ಥಿರಾಸ್ತಿ ಹರಾಜು ನಡೆಯುವ ಸ್ಥಳದಲ್ಲಿ ಡಂಗುರ ಸಾರಿ ಬಹಿರಂಗ ಹರಾಜಿನ ಕುರಿತು ಪ್ರಕಟಣೆ ಮಾಡಬೇಕು.


ಇಸ್ತಿಹಾರ್ ನಾಮೆ ಪ್ರಕಟಣೆ ಮಾಡಿದ 15 ದಿನಗಳ ಬಳಿಕ ಮಾರಾಟ ಅಧಿಪತ್ರವನ್ನು (Sale Warrant) ಹೊರಡಿಸಲಾಗುವುದು. ಮೊದಲಿಗೆ ಸ್ಥಿರಾಸ್ತಿ ಇರುವ ಜಾಗದಲ್ಲಿ ಬಹಿರಂಗ ಹರಾಜು ನಡೆಸಲಾಗುವುದು. ಯಶಸ್ವಿ ಬಿಡ್ಡುದಾರನಿಗೆ ತೆರೆದ ನ್ಯಾಯಾಲಯದಲ್ಲಿ ನಡೆಯುವ ಬಹಿರಂಗ ಹರಾಜಿಗೆ ನಿಗದಿಪಡಿಸಲಾದ ದಿನದಂದು ಹಾಜರಾಗುವಂತೆ ತಿಳಿಸಲಾಗುವುದು. ತೆರೆದ ನ್ಯಾಯಾಲಯದಲ್ಲಿ ಹರಾಜು ನಡೆದು ಅತ್ಯಧಿಕ ಮೊತ್ತದ ಬಿಡ್ಡುದಾರರನ್ನು ಯಶಸ್ವಿ ಬಿಡ್ಡುದಾರನೆಂದು ಘೋಷಿಸಲಾಗುವುದು.


ಮಾರಾಟದ ಸ್ಥಿರೀಕರಣ(Confirmation of sale)


ಯಶಸ್ವಿ ಬಿಡ್ದುದಾರರು ತೆರೆದ ನ್ಯಾಯಾಲಯದಲ್ಲಿ ಹರಾಜು ನಡೆದ ದಿನವೇ ಮಾರಾಟ ಮೌಲ್ಯದ ಶೇಕಡ 25 ರಷ್ಟನ್ನು ನ್ಯಾಯಾಲಯದಲ್ಲಿ ಠೇವಣಿ ಇಡತಕ್ಕದ್ದು. ಉಳಿಕೆ 75 ಶೇಕಡ ಮೊತ್ತವನ್ನು ಹರಾಜು ನಡೆದ 15 ದಿನಗಳ ಒಳಗೆ ನ್ಯಾಯಾಲಯದಲ್ಲಿ ಠೇವಣಿ ಇಡತಕ್ಕದ್ದು. ಸದರಿ ಸ್ಥಿರಾಸ್ತಿಗೆ ಸಂಬಂಧಪಟ್ಟಂತೆ ಯಾವುದೇ ಹಕ್ಕೊತ್ತಾಯ ಅರ್ಜಿ ಸಲ್ಲಿಸದೆ ಇದ್ದ ಪಕ್ಷದಲ್ಲಿ ಹರಾಜು ನಡೆದ 60 ದಿನಗಳ ಬಳಿಕ ಮಾರಾಟವನ್ನು ಸ್ಥಿರೀಕರಿಸಲಾಗುವುದು.


ಒಂದು ವೇಳೆ ಯಶಸ್ವಿ ಬಿಡ್ಡುದಾರರನು ಹರಾಜು ನಡೆದ 15 ದಿನಗಳೊಳಗೆ ಉಳಿಕೆ 75 ಶೇಕಡ ಹಣವನ್ನು ಠೇವಣಿ ಮಾಡದೆ ಇದ್ದಲ್ಲಿ ಆತನು ಠೇವಣಿ ಮಾಡಿದ ಹಣದಿಂದ ಮಾರಾಟದ ಖರ್ಚುಗಳನ್ನು ಕಳೆದು ಉಳಿದ ಹಣವನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಲಾಗುವುದು.


ನಷ್ಟಭರ್ತಿ (Solatium)


ಒಂದು ವೇಳೆ ಯಶಸ್ವಿ ಬಿಡ್ಡುದಾರರನು ಉಳಿಕೆ 75 ಶೇಕಡಾ ಹಣವನ್ನು ಠೇವಣಿ ಮಾಡುವ ಮೊದಲೇ ಡಿಕ್ರಿಯ ಸಂಪೂರ್ಣ ಮೊತ್ತವನ್ನು ತೀರ್ಪುಋಣಿಯು ಪಾವತಿ ಮಾಡಿದ್ದಲ್ಲಿ ಹಾಗೂ ಮಾರಾಟವನ್ನು ರದ್ದು ಪಡಿಸಬೇಕೆಂದು ನ್ಯಾಯಾಲಯಕ್ಕೆ ಆದೇಶ 21 ನಿಯಮ 89ರ ಅಡಿ ಅರ್ಜಿ ಸಲ್ಲಿಸಿದ್ದಲ್ಲಿ ಮಾರಾಟ ಮೌಲ್ಯದ ಶೇಕಡ 5 ಮೊತ್ತವನ್ನು ನಷ್ಟ ಭರ್ತಿ ರೂಪದಲ್ಲಿ ಅಂದರೆ ಸೊಲೇಶಿಯಂ ಅನ್ನು ಖರೀದಿದಾರನಿಗೆ ನೀಡಲು ಬದ್ಧನು. ಖರೀದಿದಾರನು ತಾನು ಈಗಾಗಲೇ ಪಾವತಿ ಮಾಡಿದ 25 ಶೇಕಡ ಮಾರಾಟ ಮೌಲ್ಯದ ಜೊತೆಗೆ ಐದು ಶೇಕಡ ಸೊಲೇಶಿಯಂ ಪಡೆಯಲು ಹಕ್ಕು ಉಳ್ಳವನಾಗಿರುತ್ತಾನೆ.


ಖರೀದಿದಾರನು ಹರಾಜು ಪ್ರಕಾರ ಸಂಪೂರ್ಣ ಮಾರಾಟ ಮೌಲ್ಯವನ್ನು ಪಾವತಿ ಮಾಡಿದ್ದಲ್ಲಿ ನ್ಯಾಯಾಲಯವು ಹರಾಜು ನಡೆದ 60 ದಿನಗಳ ಬಳಿಕ ಮಾರಾಟವನ್ನು ಸ್ಥಿರೀಕರಿಸಿ ಖರೀದಿದಾರನಿಗೆ ಮಾರಾಟ ಪ್ರಮಾಣ ಪತ್ರವನ್ನು ನೀಡುವಂತೆ ಆದೇಶ ಹೊರಡಿಸತಕ್ಕದ್ದು.


ಸದರಿ ಮಾರಾಟ ಪ್ರಮಾಣ ಪತ್ರವನ್ನು ಪಡೆಯಬೇಕಾದರೆ ಖರೀದಿದಾರನು ಮಾರಾಟ ಮೌಲ್ಯದ ಶೇಕಡ 5 ರಷ್ಟು ಮುದ್ರಾಂಕ ಶುಲ್ಕವನ್ನು ಪಾವತಿ ಮಾಡತಕ್ಕದ್ದು. ಮುದ್ರಾಂಕ ಶುಲ್ಕ ಪಾವತಿಸಿದಲ್ಲಿ ನ್ಯಾಯಾಲಯವು ಮಾರಾಟ ಪ್ರಮಾಣ ಪತ್ರವನ್ನು ಖರೀದಿದಾರನಿಗೆ ನೀಡುವುದು. ಸದರಿ ಮಾರಾಟ ಪ್ರಮಾಣ ಪತ್ರದ ಒಂದು ಪ್ರತಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕಳುಹಿಸಲಾಗುವುದು ಹಾಗೂ ಸದರಿ ಕಚೇರಿಯ ಒಂದನೆಯ ಪುಸ್ತಕದಲ್ಲಿ ಮಾರಾಟ ಪ್ರಮಾಣ ಪತ್ರವನ್ನು ದಾಖಲಿಸಲಾಗುವುದು. ಮಾರಾಟ ಪ್ರಮಾಣ ಪತ್ರವನ್ನು ನೋಂದಣಿ ಮಾಡುವುದು ಕಡ್ಡಾಯವಲ್ಲ. ಖರೀದಿದಾರರನು ಇಚ್ಚಿಸಿದ್ದಲ್ಲಿ ನೋಂದಣಿ ಮಾಡಬಹುದು.


ಸ್ಥಿರಾಸ್ತಿ ಮಾರಾಟ ಪ್ರಕ್ರಿಯೆಯಲ್ಲಿ ಎಚ್ಚರಿಕೆ ವಹಿಸಬೇಕಾದ ಅಂಶಗಳೇನೆಂದರೆ, ಮಾರಾಟದ ನೋಟಿಸ್ ತೀರ್ಪುಋಣಿಗೆ ನೀಡದೆ ಮಾರಾಟ ಮಾಡುವಂತಿಲ್ಲ. ಖರೀದಿದಾರರನು ಹರಾಜಿನ ಸಂಪೂರ್ಣ ಮೊತ್ತವನ್ನು ಪಾವತಿಸಿದ 60 ದಿನಗಳ ಬಳಿಕ ಮಾರಾಟವನ್ನು ಸ್ಥಿರೀಕರಿಸುವುದು. ಮಾರಾಟದ ಸ್ಥಿರೀಕರಣ ಆದ ಬಳಿಕವೇ ನಿಗದಿತ ಮುದ್ರಾಂಕ ಶುಲ್ಕ ಪಡೆದು ಮಾರಾಟ ಪ್ರಮಾಣ ಪತ್ರವನ್ನು ಸಿದ್ಧಪಡಿಸುವುದು. ಈ ಹಂತಗಳಲ್ಲಿ ಯಾವುದೇ ಪ್ರಮಾದ ಸಂಭವಿಸಿದರೂ ಮಾರಾಟ ಅಸಿಂಧು ಎನಿಸಿಕೊಳ್ಳುವುದು.


✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ




Ads on article

Advertise in articles 1

advertising articles 2

Advertise under the article