ಪೊಲೀಸರ ವಿರುದ್ಧ ಕ್ರಮ: ಮಾನವ ಹಕ್ಕುಗಳಿಗೆ ಅಧಿಕಾರ ಇದೆಯೇ..?- ಕರ್ನಾಟಕ ಹೈಕೋರ್ಟ್ ತೀರ್ಪಿನಲ್ಲಿ ಹೇಳಿದ್ದೇನು..?
ಪೊಲೀಸರ ವಿರುದ್ಧ ಕ್ರಮ: ಮಾನವ ಹಕ್ಕುಗಳಿಗೆ ಅಧಿಕಾರ ಇದೆಯೇ..?- ಕರ್ನಾಟಕ ಹೈಕೋರ್ಟ್ ತೀರ್ಪಿನಲ್ಲಿ ಹೇಳಿದ್ದೇನು..?
ಮೇಲ್ನೋಟಕ್ಕೆ ತಪ್ಪು ಎಂದು ಕಂಡುಬಂದರೆ ಆರೋಪಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ (KSHC) ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾತ್ರ ಮಾಡಬಹುದು. ಆದರೆ, ಈ ಬಗ್ಗೆ ನಿರ್ದೇಶನ ನೀಡುವ ಅಧಿಕಾರ ಆಯೋಗಕ್ಕೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾ. ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ. ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಇಂದಿರಾನಗರದ ಬೆಸ್ಕಾಂ ವಿಜಿಲೆನ್ಸ್ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಸಿ. ಗಿರೀಶ್ ನಾಯಕ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಗೊಳಿಸಿ ನ್ಯಾಯಪೀಠ ಈ ತೀರ್ಪು ನೀಡಿದೆ.
2020ರ ಮಾರ್ಚ್ 12ರಂದು ಮಾನವ ಹಕ್ಕುಗಳ ಆಯೋಗವು ಸರ್ಕಾರಕ್ಕೆ ವರದಿಯೊಂದು ನೀಡಿತ್ತು. ಇದರಲ್ಲಿ ಈ ವರದಿ ಕೆಲವೊಂದು ಶಿಫಾರಸ್ಸುಗಳನ್ನು ಹೊಂದಿತ್ತು. ಆದರೆ, ಅದರ ಪದ ರಚನೆ ಮತ್ತು ಸ್ವರೂಪ ನಿರ್ದೇಶನ ರೂಪದಲ್ಲಿ ಇವೆ. ಇದು ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ ಸೆಕ್ಷನ್ 18ರ ಅಡಿಯಲ್ಲಿ ತನ್ನ ವ್ಯಾಪ್ತಿಯನ್ನು ಮೀರಿವೆ ಎಂಬುದಾಗಿ ಅರ್ಜಿದಾರರು ವಾದಿಸಿದ್ದರು.
ಕಾಯ್ದೆಯ ಸೆಕ್ಷನ್ 29ರ ಅಡಿ ಆಯೋಗವು ತನಿಖೆಯ ಕಾಯ್ದೆಯ ಸೆಕ್ಷನ್ 18ರ ಅಡಿಯಲ್ಲಿ ನಿಯಂತ್ರಿಸಲ್ಪಡುತ್ತದೆ.. ಇದರ ಪ್ರಕಾರ ತನಿಖೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ಕಂಡುಬಂದರೆ ಸೆಕ್ಷನ್ 18(a) ಅಡಿ ಕ್ರಮಕ್ಕೆ ಶಿಫಾರಸು ಮಾಡಬಹುದು ಎಂದು ನ್ಯಾಯಪೀಠ ಹೇಳಿದೆ.
ಈ ಹಿನ್ನೆಲೆಯಲ್ಲಿ 12-03-2020ರ ವರದಿಯನ್ನು ಆಯೋಗದ ಶಿಫಾರಸ್ಸು ಎಂದೇ ಪರಿಗಣಿಸಬಹದು ಮತ್ತು ಅದರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರವಾದ ಪ್ರತಿವಾದಿಗಳು ಸ್ವತಂತ್ರರಾಗಿದ್ದಾರೆ ಎಂದು ನ್ಯಾಯಪೀಠ ತೀರ್ಪು ನೀಡಿದೆ.
ಪ್ರಕರಣ: ಗಿರೀಶ್ ಸಿ. ನಾಯಕ್ ಮತ್ತಿತರರು Vs ಕರ್ನಾಟಕ ಸರ್ಕಾರ ಮತ್ತಿತರರು
ಕರ್ನಾಟಕ ಹೈಕೋರ್ಟ್, 7893/2020 Dated 05-03-2024