ಪತ್ನಿ ದುಡಿಯಲು ಸಮರ್ಥರಿದ್ದರೂ ಪತಿ ಜೀವನಾಂಶ ನೀಡಲೇಬೇಕು: ಕರ್ನಾಟಕ ಹೈಕೋರ್ಟ್
ಪತ್ನಿ ದುಡಿಯಲು ಸಮರ್ಥರಿದ್ದರೂ ಪತಿ ಜೀವನಾಂಶ ನೀಡಲೇಬೇಕು: ಕರ್ನಾಟಕ ಹೈಕೋರ್ಟ್
ಪತ್ನಿ ಉದ್ಯೋಗ ಮಾಡಲು ಅರ್ಹತೆ ಮತ್ತು ಸಾಮರ್ಥ್ಯ ಇದ್ದರೂ ಪತಿ ತನ್ನ ಪತ್ನಿಗೆ ಜೀವನಾಂಶ ನೀಡಲೇಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ಮಕ್ಕಳನ್ನು ನೋಡಿಕೊಳ್ಳುವುದು ಸ್ವಲ್ಪ ಹೊತ್ತಿನ ಕೆಲಸ. ಆ ಬಳಿಕ ಪತ್ನಿ ತನ್ನ ಅರ್ಹತೆಗೆ ತಕ್ಕಂತೆ, ಅವಕಾಶ ಇದ್ದಾಗ ಉದ್ಯೋಗ ಮಾಡಬಹುದು. ಆದರೆ, ಆಕೆಗೆ ಸಾಮರ್ಥ್ಯ ಇದ್ದರೂ ಉದ್ಯೋಗ ಮಾಡುತ್ತಿಲ್ಲ. ಹೀಗಾಗಿ. ಆಕೆಗೆ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂಬ ಪತಿಯ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಮಕ್ಕಳನ್ನು ಪಾಲನೆ ಮಾಡುವುದು ಪೂರ್ಣಾವಧಿ ಕೆಲಸ. ಹೀಗಾಗಿ ಪತ್ನಿ ಸೋಮಾರಿಯಂತೆ ಓಡಾಡಿಕೊಂಡಿದ್ದಾಳೆ ಎಂಬ ಪತಿಯ ವಾದವನ್ನು ಒಪ್ಪಲಾಗದು. ಅದೇ ರೀತಿ, ಮಕ್ಕಳ ಪಾಲನೆಗೆ ಆಕೆಯೂ ದುಡಿಯಬೇಕು ಎಂಬುದು ಸಮಂಜಸವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ ರೂ. 18000/- ಜೀವನಾಂಶವನ್ನು 36,000/-ಕ್ಕೆ ಏರಿಸಬೇಕು ಎಂದು ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.
ಪತಿ ಕೆನರಾ ಬ್ಯಾಂಕ್‌ನ ಮ್ಯಾನೇಜರ್ ಆಗಿದ್ದಾರೆ. ಅದು ನಿಗದಿತ ವಯಸ್ಸಿನ ವರೆಗೆ ಭದ್ರತೆ ಇರುವ ಉದ್ಯೋಗ. ಸದ್ಯ ಸುಮಾರು 90 ಸಾವಿರ ರೂ. ವೇತನ ಪಡೆಯುತ್ತಿದ್ದಾರೆ. ಹಾಗಾಗಿ, ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಪತ್ನಿಗೆ 36 ಸಾವಿರ ಜೀವನಾಂಶ ನೀಡಲೇಬೇಕು ಎಂದು ಆದೇಶ ನೀಡಿದ ನ್ಯಾಯಪೀಠ, ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿ ಕೆಲಸ ಎಂದು ಹೇಳಿದೆ
ಪ್ರಕರಣದ ವಿವರ
ಕೆನರಾ ಬ್ಯಾಂಕ್ ಮ್ಯಾನೇಜರ್ ಹಾಗೂ ಉಪನ್ಯಾಸಕಿಯಾಗಿ ವೃತ್ತಿ ನಡೆಸುತ್ತಿದ್ದ ದಂಪತಿಗೆ 11 ಹಾಗೂ 6 ವರ್ಷದ ಇಬ್ಬರು ಮಕ್ಕಳಿದ್ದಾರೆ. ಮೊದಲ ಮಗುವಾದ ನಂತರ ಪತ್ನಿ ಉದ್ಯೋಗ ತ್ಯಜಿಸಿದ್ದರು. ಆ ಬಳಿಕ ಎರಡನೇ ಮಗು ಜನಿಸಿತು. ಹೀಗಾಗಿ ಮತ್ತೆ ಕೆಲಸಕ್ಕೆ ಸೇರಲಿಲ್ಲ.
ತರುವಾಯ, ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಪರಸ್ಪರ ವಿಚ್ಚೇದನ ಕೋರಿದ್ದರು. ಆ ಅರ್ಜಿ ಬಾಕಿ ಇರುವಾಗಲೇ ಪತ್ನಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರಡಿ ಪ್ರತಿ ತಿಂಗಳು 36 ಸಾವಿರ ರೂ. ಮಧ್ಯಂತರ ಜೀವನಾಂಶಕ್ಕೆ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯ 18 ಸಾವಿರ ರೂ. ಜೀವನಾಂಶ ನಿಗದಿಪಡಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಪತ್ನಿ ಜೀವನಾಂಶದ ಮೊತ್ತವನ್ನು ಏರಿಸಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.