ಒಬ್ಬರು ದಿಕ್ಕುತಪ್ಪಿಸಬಹುದು, ಇನ್ನೊಬ್ಬರು ಮುನ್ನಡೆಸಬಹುದು, ಜನ ನಿರ್ಧರಿಸುತ್ತಾರೆ, ಭಾರತೀಯ ಮತದಾರರನ್ನು ಕಡೆಗಣಿಸದಿರಿ: ಹೈಕೋರ್ಟ್
ಒಬ್ಬರು ದಿಕ್ಕುತಪ್ಪಿಸಬಹುದು, ಇನ್ನೊಬ್ಬರು ಮುನ್ನಡೆಸಬಹುದು, ಜನ ನಿರ್ಧರಿಸುತ್ತಾರೆ, ಭಾರತೀಯ ಮತದಾರರನ್ನು ಕಡೆಗಣಿಸದಿರಿ: ಹೈಕೋರ್ಟ್
ರಾಜಕಾರಣಿಗಳಲ್ಲಿ ಕೆಲವೊಬ್ಬರು ದಿಕ್ಕುತಪ್ಪಿಸಬಹುದು, ಇನ್ನೊಬ್ಬರು ಮುನ್ನಡೆಸಬಹುದು, ಅದನ್ನು ಜನ ನಿರ್ಧರಿಸುತ್ತಾರೆ, ಭಾರತೀಯ ಮತದಾರರನ್ನು ಕಡೆಗಣಿಸದಿರಿ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಕೈಗಾರಿಕೋದ್ಯಮಿಗಳ ಪರವಾಗಿ ಕೇಂದ್ರ ಸರ್ಕಾರ 16 ಲಕ್ಷ ಕೋಟಿ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ ಎಂದು ರಾಹುಲ್ ಗಾಂಧಿ, ಅಖಿಲೇಶ್ ಯಾದವು ಮತ್ತು ಅರವಿಂದ ಕೇಜ್ರೀವಾಲ್ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರದ ವಿರುದ್ಧ ಇಂತಹ ದಾರಿ ತಪ್ಪಿಸುವ ಮತ್ತು ಸುಳ್ಳು ಹೇಳಿಕೆ ನೀಡಿದ ಮತ್ತು ಭಾರತದ ವಿಶ್ವಾಸಾರ್ಹತೆಗೆ ಹಾನಿ ಉಂಟು ಮಾಡಿದ ಇವರ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಮತ್ತು ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈ ತೀರ್ಪು ನೀಡಿದೆ.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಹಂಗಾಮಿ ಮುಖ್ಯ ನ್ಯಾ. ಮನಮೋಹನ್ ಮತ್ತು ನ್ಯಾ. ಮನ್ಮಿತ್ ಪ್ರೀತಮ್ ಸಿಂಗ್ ಅರೋರ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮತ್ತು ಅರವಿಂದ ಕೇಜ್ರೀವಾಲ್ ಅವರ ವಿರುದ್ಧ ಕ್ರಮ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ವಿರೋಧ ಪಕ್ಷದ ನಾಯಕರ ಹೇಳಿಕೆಗಳಿಗೆ ಯಾವುದೇ ಕೈಗಾರಿಕೋದ್ಯಮಿ ಅಥವಾ ಬೇರೆ ಯಾರಾದರೂ ಅಸಮಾಧಾನಗೊಂಡಿದ್ದರೆ ಅವರು ನ್ಯಾಯಾಲಯದ ಮೆಟ್ಟಿಲೇರಲು ಮುಕ್ತ ಅವಕಾಶವಿದೆ. ಅವರ ಪರವಾಗಿ ಮೂರನೇ ವ್ಯಕ್ತಿ ಪಿಐಎಲ್ ಸಲ್ಲಿಸುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಮತದಾರನ ವಿವೇಚನಾ ಶಕ್ತಿಯನ್ನು ಕಡೆಗಣಿಸಲು ಸಾಧ್ಯವಿಲ್ಲ. ಯಾರು ಸತ್ಯ ನುಡಿಯುತ್ತಿದ್ದಾರೆ ಮತ್ತು ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದು ಜಾಗೃತ ಮತದಾರನಿಗೆ ದೊತ್ತಿದೆ. ಅವರ ಶಕ್ತಿಯನ್ನು ಕಡೆಗಣಿಸಬೇಡಿ ಎಂದು ನ್ಯಾಯಪೀಠ ಅರ್ಜಿದಾರರಿಗೆ ಕಿವಿಮಾತು ಹೇಳಿದೆ.
ನಾನೊಬ್ಬ ರೈತ ಮತ್ತು ಸಾಮಾಜಿಕ ಕಾರ್ಯಕರ್ತ ಎಂದು ಅರ್ಜಿದಾರ ಸುರ್ಜಿತ್ ಸಿಂಗ್ ಯಾದವ್ ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದರು.
ಪ್ರತಿಪಕ್ಷದ ರಾಜಕಾರಣಿಗಳ ಹೇಳಿಕೆಗಳು ಭಾರತದ ಬಗ್ಗೆ ನಕಾರಾತ್ಮಕ ಚಿತ್ರಣ ನೀಡಿವೆ. ಕೇಂದ್ರ ಸರ್ಕಾರದ ವಿಶ್ವಾಸಾರ್ಹತೆಗೆ ಕುಂದು ತಂದಿದೆ. ಇಂತಹ ಹೇಳಿಕೆಗಳಿಂದ ವಿದೇಶಿ ಹೂಡಿಕೆ ಮತ್ತು ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿದೆ. ಅರಾಜಕತೆಯನ್ನೂ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಅರ್ಜಿದಾರರು ಬಣ್ಣಿಸಿದ್ದರು.