ಒಮ್ಮತದ ವಿಚ್ಚೇದನ ಇತ್ಯರ್ಥ ಒಪ್ಪಂದದಿಂದ ಏಕಪಕ್ಷೀಯವಾಗಿ ಹಿಂದೆ ಸರಿಯುವುದು ಮಾನಸಿಕ ಕ್ರೌರ್ಯ- ಹೈಕೋರ್ಟ್ ತೀರ್ಪು
ಒಮ್ಮತದ ವಿಚ್ಚೇದನ ಇತ್ಯರ್ಥ ಒಪ್ಪಂದದಿಂದ ಏಕಪಕ್ಷೀಯವಾಗಿ ಹಿಂದೆ ಸರಿಯುವುದು ಮಾನಸಿಕ ಕ್ರೌರ್ಯ- ಹೈಕೋರ್ಟ್ ತೀರ್ಪು
ಯಾವುದೇ ಕಾರಣವಿಲ್ಲದೆ ಏಕಪಕ್ಷೀಯವಾಗಿ ವಿಚ್ಚೇದನ ಇತ್ಯರ್ಥ ಒಪ್ಪಂದದಿಂದ ಸಂಗಾತಿಯೊಬ್ಬರು ಹಿಂದೆ ಸರಿದರೆ ಅದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾ. ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಪ್ರತಿವಾದಿಯನ್ನು ತಮ್ಮ ವಿವಾದಗಳು ಕೊನೆಗೊಳ್ಳಲಿವೆ ಎಂದು ನಂಬುವಂತೆ ಮಾಡುವಲ್ಲಿ ಮತ್ತು ನಂತರ ಇತ್ಯರ್ಥದ ಪ್ರಯತ್ನದಿಂದ ಹಿಂದೆ ಸರಿಯುವ ಮೂಲಕ ಮೇಲ್ಮನವಿದಾರೆ/ಪತ್ನಿಯ ಇಂತಹ ನಡವಳಿಕೆಯು ಪ್ರತಿವಾದಿ/ಪತಿಯ ಮನಸ್ಸಿನಲ್ಲಿ ಅಸಮಾಧಾನ, ಕ್ರೌರ್ಯ ಮತ್ತು ಅನಿಶ್ಚಿತತೆಗೆ ಕಾರಣವಾಗಬಹುದು.
ಪಕ್ಷಕಾರರ ನಡುವಿನ ಜಗಳವು ಯಾವುದೇ ಸಮರ್ಥನೀಯ ಆಧಾರದ ಮೇಲೆ ಅಲ್ಲದೆ, ಸಂಗಾತಿಯ ವಿರುದ್ಧದ ಸೇಡು ತೀರಿಸಿಕೊಳ್ಳುವ ಬಯಕೆಯಿಂದ ಪ್ರಚೋದಿಸಲ್ಪಟ್ಟ ಅಹಂಕಾರಗಳ ಸಂಘರ್ಷವಾಘಿದೆ ಎಂದು ಸ್ಪಷ್ಟವಾಗುತ್ತದೆ. ಆದುದರಿಂದ ಪರಸ್ಪರ ಒಪ್ಪಿಗೆಯಿಂದ ವಿಚ್ಚೇದನದಿಂದ ಏಕಪಕ್ಷೀಯವಾಗಿ ಹಿಂದೆ ಸರಿಯುವುದು ಕ್ರೌರ್ಯಕ್ಕೆ ಸಮನಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಘಟನೆಯ ಹಿನ್ನೆಲೆ:
ಕ್ರೌರ್ಯದ ಆಧಾರದ ಮೇಲೆ ವಿಚ್ಚೇದನ ಕೋರಿದ್ದ ಪತಿಯ ಮನವಿಯನ್ನು ಅನುಮತಿಸಿ 20-03-2017ರಂದು ಕೌಟುಂಬಿಕ ನ್ಯಾಯಾಲಯವು ನೀಡಿದ್ದ ಆದೇಶದ ವಿರುದ್ಧ ಮೇಲ್ಮನವಿ ವಿಚಾರಣೆ ನಡೆಸುವಾಗ ನ್ಯಾಯಾಲಯವು ಈ ತೀರ್ಪನ್ನು ಬದಲಿಸಿತು.
ಈ ಜೋಡಿಯು 2001ರ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದರು. ಆದರೆ, ಜನವರಿ 2003ರಲ್ಲಿ ಬೇರ್ಪಟ್ಟಿದ್ದರು. ವಿವಾಹವು ಕೇವಲ 13 ತಿಂಗಳು ಮಾತ್ರ ಉಳಿದಿತ್ತು.
ಪತಿ ಪತ್ನಿ ನಡುವೆ ಸಂಶಯ, ಸಂದೇಹ ಹಾಗೂ ವಿವಾದಗಳು ಮದುವೆಯ ಬೆನ್ನಿಗೆ ಮೂಡಿದ್ದರಿಂದ ದಂಪತಿ ಪರಸ್ಪರ ಒಪ್ಪಿಗೆಯಿಂದ ವಿಚ್ಚೇದನ ಪಡೆಯಲು ಒಪ್ಪಿಕೊಂಡಿದ್ದರು.
ಒಪ್ಪಂದದ ಭಾಗಶಃ ಅನುಷ್ಟಾನದ ಭಾಗವಾಗಿ 5 ಲಕ್ಷ ರೂ.ಗಳ ಡಿಮ್ಯಾಂಡ್ ಡ್ರಾಫ್ಟ್‌ನ್ನು ಪತ್ನಿ ಸ್ವೀಕರಿಸಿದ್ದರು. ಆದರೂ, ಆ ನಂತರ ಆಕೆ ಅದನ್ನು ಹಿಂತಿರುಗಿಸಿದರು. ನಂತರ ಪತಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದರು.
ತನ್ನ ಪತಿ ಅನೇಕ ಹುಡುಗಿಯರೊಂದಿಗೆ ಸ್ನೇಹ ಹೊಂದಿದ್ದಾನೆ ಮತ್ತು ವ್ಯಭಿಚಾರದ ಸಂಬಂಧಗಳನ್ನು ಹೊಂದಿದ್ದಾನೆ ಎಂದು ಪತ್ನಿ ಆರೋಪಿಸಿದ್ದರು. ಆದರೆ, ವ್ಯಭಿಚಾರದ ಆರೋಪವನ್ನು ಸಾಬೀತುಪಡಿಸಲು ತನ್ನ ಬಳಿ ಯಾವುದೇ ದೃಢವಾದ ಪುರಾವೆಗಳು ಇಲ್ಲ ಎಂದು ಪಾಟೀ ಸವಾಲಿನಲ್ಲಿ ಆಕೆ ಒಪ್ಪಿಕೊಂಡಿದ್ದನ್ನು ಹೈಕೋರ್ಟ್ ಗಮನಿಸಿತು.
ಅಂತಿಮವಾಗಿ, ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳು ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, 20-03-2017ರಂದು ಕೌಟುಂಬಿಕ ನ್ಯಾಯಾಲಯವು ನೀಡಿದ್ದ ಆದೇಶದಲ್ಲಿ ಯಾವುದೇ ನ್ಯೂನ್ಯತೆ ಇಲ್ಲ ಎಂದು ತೀರ್ಮಾನಿಸಿ ತೀರ್ಪು ನೀಡಿತು. ಮೇಲ್ಮನವಿಯನ್ನು ತಿರಸ್ಕರಿಸಿತು.