ಜಿಲ್ಲಾ ನ್ಯಾಯಾಧೀಶರ ವಿರುದ್ಧದ ತನಿಖಾ ವರದಿ ಪ್ರಕರಣ: ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ 10 ಲಕ್ಷ ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್
ಜಿಲ್ಲಾ ನ್ಯಾಯಾಧೀಶರ ವಿರುದ್ಧದ ತನಿಖಾ ವರದಿ ಪ್ರಕರಣ: ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ 10 ಲಕ್ಷ ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್
ಟೈಪಿಸ್ಟ್ ಜೊತೆ ಜಿಲ್ಲಾ ನ್ಯಾಯಾಧೀಶರೊಬ್ಬರ ವಿರುದ್ಧ ಅಕ್ರಮ ಸಂಬಂಧ ಮತ್ತು ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಒಪ್ಪಿತವಲ್ಲದ ವರದಿ ಪ್ರಕಟಿಸಿದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ಕರ್ನಾಟಕ ಹೈಕೋರ್ಟ್ 10 ಲಕ್ಷ ರೂ. ದಂಡ ವಿಧಿಸಿ ತೀರ್ಪು ಹೊರಡಿಸಿದೆ.
ನ್ಯಾ.. ಎನ್. ಎಸ್. ಸಂಜಯ್ ಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ಹೊರಡಿಸಿದ್ದು, ಪತ್ರಿಕೆಯ ಮಾತೃ ಸಂಸ್ಥೆಯಾದ ಎಕ್ಸ್‌ಪ್ರೆಸ್ ಪಬ್ಲಿಕೇಷನ್ಸ್ (ಮಧುರೈ) ಲಿಮಿಟೆಡ್ ದಂಡದ ಹಣವನ್ನು ಎರಡ ತಿಂಗಳ ಒಳಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಜಮೆ ಮಾಡಬೇಕು ಎಂದು ನಿರ್ದೇಶನ ನೀಡಿದೆ.
ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜವಾಬ್ದಾರಿಯುತ ಪತ್ರಿಕೆ ಎಂಬ ತನ್ನ ಗರಿಮೆಗೆ ತಕ್ಕಂತೆ ನಡೆದುಕೊಂಡಿಲ್ಲ. ಪತ್ರಿಕೆಯ ವರದಿಗಾರರು ಮತ್ತು ಸಂಪಾಕದರ ನಡೆ ಒಪ್ಪಿತ ರೀತಿಯಲ್ಲಿ ಇಲ್ಲ ಎಂದಿರುವ ನ್ಯಾಯಪೀಠ, ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ಆಕ್ಷೇಪಾರ್ಹವಾದ ವರದಿ ಪ್ರಕಟಿಸುವುದಕ್ಕೂ ಆರು ತಿಂಗಳ ಮುನ್ನ ತನಿಖಾ ಪ್ರಾಧಿಕಾರದ ವರದಿ ಒಪ್ಪದಿರಲು ಪೂರ್ಣ ನ್ಯಾಯಾಲಯ ನಿರ್ಧರಿಸಿತ್ತು. ಆದರೂ, ಈ ಮಹತ್ವದ ಅಂಶವನ್ನು ವರದಿಯಲ್ಲಿ ಎಲ್ಲೂ ಉಲ್ಲೇಖಿಸಿಲ್ಲ ಎಂದು ತೀರ್ಪಿನಲ್ಲಿ ಹೇಳಿದೆ.
ಶೀಘ್ರ ಲಿಪಿಗಾರ್ತಿ(ಸ್ಟೆನೋ) ಜೊತೆಗೆ ಒಪ್ಪಿತವಲ್ಲದ ಆತ್ಮೀಯ ಸಂಬಂಧವನ್ನು ಅರ್ಜಿದಾರರು ಹೊಂದಿದ್ದಾರೆ ಎನ್ನುವುದನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ವರದಿಯಲ್ಲಿ ಇದಾಗಲೇ ನಿರೂಪಿಸಲಾಗಿದೆ ಎನ್ನುವ ರೀತಿಯಲ್ಲಿ ಪತ್ರಿಕೆಯು ವರದಿಗಾರಿಕೆ ಮಾಡಿದೆ. ಅಲ್ಲದೆ, ಮುಂದುವರಿದು ಅರ್ಜಿದಾರರ ವಿರುದ್ಧ ಹೊರಿಸಲಾದ ಎಲ್ಲ ಅರೋಪಗಳ ಸಾರಾಂಶವನ್ನೂ ನೀಡಿದೆ ಎನ್ನುವ ಅಂಶವನ್ನು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿತು.
ವರದಿ ಪ್ರಕಟಿಸುವುದಕ್ಕೂ ಮೂನ್ನ ಪತ್ರಿಕೆಯ ಸಂಬಂಧಪಟ್ಟವರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮತ್ತು ಅರ್ಜಿದಾರರನ್ನು ಸಂಪರ್ಕಿಸಿದ್ದಾರೆ. ಆದ್ದರಿಂದ ತನಿಖೆಗೆ ಸಂಬಂಧಿಸಿದಂತೆ ಪ್ರಕ್ರಿಯೆಯ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳುವುದನ್ನು ಒಪ್ಪಲಾಗದು. ಪ್ರಕರಣದ ಸೂಕ್ಷ್ಮತೆಯನ್ನು ಅರಿತು ವೃತ್ತಿಪರವಾಗಿ ನಡೆದುಕೊಳ್ಳದೇ ಇರುವುದರಿಂದ ಅರ್ಜಿದಾರರಿಗೆ ಅಪಾರ ಹಾನಿಯಾಗಿದೆ. ಅಷ್ಟೇ ಅಲ್ಲ, ನ್ಯಾಯಾಂಗ ಅಧಿಕಾರಿಯ ನಡತೆ ನಿರ್ಧರಿಸುವ ಸಂಪೂರ್ಣ ನ್ಯಾಯಾಂಗ ಪ್ರಕ್ರಿಯೆಗೆ ಹಿನ್ನಡೆಯಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅರೆಬೆಂದ ವಾಸ್ತವಿಕ ಅಂಶವನ್ನು ಹೊಂದಿರುವ ವರದಿಯನ್ನು ಪತ್ರಿಕೆ ಪ್ರಕಟಿಸಬಾರದಿತ್ತು. ಇಲ್ಲದೇ ಇದ್ದರೆ, ಪತ್ರಿಕೆ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕಿತ್ತು. ಇದು ಹಿರಿಯ ನ್ಯಾಯಾಂಗ ಅಧಿಕಾರಿಗೆ ಸಂಬಂಧಿಸಿದ ಸೂಕ್ಷ್ಮ ಪ್ರಕರಣ ಎಂದು ನ್ಯಾಯಪೀಠ ಹೇಳಿದೆ.