ಡಿಕೆ ಶಿವಕುಮಾರ್‌ಗೆ ಸುಪ್ರೀಂ ಕೋರ್ಟ್ ರಿಲೀಫ್: ಇ.ಡಿ. ಪ್ರಕರಣ ರದ್ದುಗೊಳಿಸಿ ತೀರ್ಪು
ಡಿಕೆ ಶಿವಕುಮಾರ್‌ಗೆ ಸುಪ್ರೀಂ ಕೋರ್ಟ್ ರಿಲೀಫ್: ಇ.ಡಿ. ಪ್ರಕರಣ ರದ್ದುಗೊಳಿಸಿ ತೀರ್ಪು
ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ.) ಹಣ ವರ್ಗಾವಣೆ ತಡೆ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 120 ಬಿ ಪ್ರಕಾರ ಅಪರಾಧಿಕ ಒಳಸಂಚು ಆರೋಪ ಹೊರಿಸಿ ಈ ಪ್ರಕರಣವನ್ನು ದಾಖಲಿಸಲಾಗಿತ್ತು.
ನ್ಯಾ. ಸೂರ್ಯಕಾಂತ್ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಹೈಕೋರ್ಟ್ ಆದೇಶವನ್ನು ಅನೂರ್ಜಿತಗೊಳಿಸಿದ್ದು, ಡಿ.ಕೆ. ಶಿವಕುಮಾರ್ ಮತ್ತು ದೆಹಲಿ ಕರ್ನಾಟಕ ಭವನದ ಸಿಬ್ಬಂದಿ ಆಂಜನೇಯ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಗಳನ್ನು ಪುರಸ್ಕರಿಸಿದೆ.
ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇರುವ ಕಾಂಗ್ರೆಸ್ ಪಕ್ಷಕ್ಕೆ ಈ ತೀರ್ಪು ಮಹತ್ವದ ಬಲ ತಂದು ಕೊಟ್ಟಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.
ಶಿವಕುಮಾರ್ ಅವರದ್ದು ಆದಾಯ ತೆರಿಗೆಗೆ ಸಂಬಂಧಿಸಿದ ಪ್ರಕರಣವಾಗಿದೆ. ಆದರೆ, ಜಾರಿ ನಿರ್ದೇಶನಾಲಯವು ಐಪಿಸಿ ಸೆಕ್ಷನ್ 120 ಬಿ ಪ್ರಕಾರ ಅಪರಾಧಿಕ ಒಳಸಂಚು ಆರೋಪ ಹೊರಿಸಿ ಈ ಪ್ರಕರಣವನ್ನು ದಾಖಲಿಸಿದೆ ಎಂದು ಡಿಕೆಶಿ ಮತ್ತು ಆಂಜನೇಯ ಪರ ವಕೀಲರು ವಾದಿಸಿದ್ದರು.