ದ್ವಿಪತ್ನಿತ್ವ ಪ್ರಕರಣ: 2ನೇ ಸಂಗಾತಿ, ಬಂಧುಗಳ ಮೇಲೆ ಕ್ರಮ- ಪ್ರಕರಣ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ದ್ವಿಪತ್ನಿತ್ವ ಪ್ರಕರಣ: 2ನೇ ಸಂಗಾತಿ, ಬಂಧುಗಳ ಮೇಲೆ ಕ್ರಮ- ಪ್ರಕರಣ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್ ಕರ್ನಾಟಕ ಹೈಕೋರ್ಟ್
ದ್ವಿಪತ್ನಿತ್ವ ಪ್ರಕರಣದಲ್ಲಿ ಎರಡನೇ ಸಂಗಾತಿ ಮತ್ತು ಅವರ ಬಂಧುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಚಿತ್ರದುರ್ಗ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಹೂಡಿರುವ ಪ್ರಕರಣವನ್ನು ರದ್ದುಗೊಳಿಸಲು ಕೋರಿ ಎರಡನೇ ಪತ್ನಿಯ ಪೋಷಕರು ಮತ್ತು ಅವರ ಬಂಧುಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494 ಪ್ರಕಾರ, ಮೊದಲನೇ ಮದುವೆ ಚಾಲ್ತಿಯಲ್ಲಿ ಇದ್ದಾಗ ಪತಿ ಅಥವಾ ಪತ್ನಿ ಎರಡನೇ ಮದುವೆಯಾದರೆ ಆಗ ಎರಡನೇ ಮದುವೆಯಾಗುವವರನ್ನು ವಿಚಾರಣೆಗೆ ಒಳಪಡಿಸಬಹುದೇ ಹೊರತು ಅವರನ್ನು ಎರಡನೇ ಮದುವೆ ಆದವರನ್ನು ಅಥವಾ ಅವರ ಕುಟುಂಬದವರನ್ನು ಅಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಐಪಿಸಿ ಸೆಕ್ಷನ್ 494ನ್ನು ಪರಿಶೀಲಿಸುವುದಾದರೆ, ಮೊದಲ ಗಂಡ ಅಥವಾ ಹೆಂಡತಿ ಬದುಕಿದ್ದಾಗಲೇ ಪತಿ ಅಥವಾ ಪತ್ನಿ ಇನ್ನೊಂದು ಮದುವೆಯಾದರೆ ಅದು ಅಪರಾಧವಾಗುತ್ತದೆ. ಅಂತಹ ಪ್ರಕರಣಗಳಲ್ಲಿ ಏಳು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ, ಅದರಲ್ಲೂ ಕೆಲವು ವಿನಾಯಿತಿಗಳಿವೆ. ಅದು ಈ ಪ್ರಕರಣಕ್ಕೆ ಅನ್ವಯಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಎರಡನೇ ಮದುವೆಯಲ್ಲಿ ಭಾಗವಹಿಸಿದ್ದರು ಎನ್ನುವ ಕಾರಣಕ್ಕೆ ಎರಡನೇ ಪತ್ನಿ ಯಾ ಪತಿಯ ಪೋಷಕರು ಹಾಗೂ ಬಂಧುಗಳನ್ನು ವಿಚಾರಣೆಗೊಳಪಡಿಸಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.