ಆರೋಪಿ ಒಪ್ಪಿದರೂ ನೋಂದಣಿಯಾಗದ ದಾಖಲೆಯ ಜೆರಾಕ್ಸ್ ಪ್ರತಿಯನ್ನು ದ್ವಿತೀಯ ಸಾಕ್ಷಿಯಾಗಿ ಒಪ್ಪಿಕೊಳ್ಳಲಾಗದು: ಕರ್ನಾಟಕ ಹೈಕೋರ್ಟ್
ಆರೋಪಿ ಒಪ್ಪಿದರೂ ನೋಂದಣಿಯಾಗದ ದಾಖಲೆಯ ಜೆರಾಕ್ಸ್ ಪ್ರತಿಯನ್ನು ದ್ವಿತೀಯ ಸಾಕ್ಷಿಯಾಗಿ ಒಪ್ಪಿಕೊಳ್ಳಲಾಗದು: ಕರ್ನಾಟಕ ಹೈಕೋರ್ಟ್
ಪ್ರಕರಣದಲ್ಲಿ ನೋಂದಣಿಯಾಗದ ದಾಖಲೆಯ ಜೆರಾಕ್ಸ್ ಪ್ರತಿಯನ್ನು ಆರೋಪಿ ಒಪ್ಪಿಕೊಂಡರೂ, ಅದನ್ನು ದ್ವಿತೀಯ ಸಾಕ್ಷಿಯಾಗಿ ಒಪ್ಪಿಕೊಳ್ಳಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ನೋಂದಣಿಯಾಗದ ಮಾರಾಟ ಒಪ್ಪಂದದ ಜೆರಾಕ್ಸ್ ಪ್ರತಿಯನ್ನು ಆರೋಪಿಯ ಸಮ್ಮತಿಯ ಕಾರಣಕ್ಕೆ ನ್ಯಾಯಾಲಯದ ವಿಚಾರಣೆಯ ವೇಳೆ ದ್ವಿತೀಯ ಸಾಕ್ಷಿ(Secondary Evidence) ಆಗಿ ಒಪ್ಪಿಕೊಳ್ಳಲಾಗದು ಎಂದು ನ್ಯಾಯಪೀಠ ಹೇಳಿದೆ.
ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ನ ಸೆಕ್ಷನ್ 138 ರ ಅಡಿಯಲ್ಲಿ ವಿಚಾರಣೆಯಲ್ಲಿ ಎರಡನೇ ಸಾಕ್ಷ್ಯವಾಗಿ ನೋಂದಾವಣೆಯಾಗದ 'ಮಾರಾಟ ಒಪ್ಪಂದ'ದ ಜೆರಾಕ್ಸ್ ಪ್ರತಿಯನ್ನು ವಿಚಾರಣಾ ನ್ಯಾಯಾಲಯ ಎರಡನೇ ಸಾಕ್ಷಿಯ ನೆಲೆಯಲ್ಲಿ ನಿಶಾನೆಯಾಗಿ ಗುರುತಿಸಲು ಅನುಮತಿ ನಿರಾಕರಿಸಿತ್ತು. ಈ ದಾಖಲೆಯಲ್ಲಿ ಆರೋಪಿಯ ಸಹಿ ಇದ್ದು ಈ ಸಹಿ ಆತನದ್ದೇ ಎಂದು ನಿರೂಪಿಸಲು ಈ ದಾಖಲೆಯನ್ನು ಹಾಜರುಪಡಿಸಲಾಗಿತ್ತು.
ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಭುವನೇಶ್ವರಿ ಎಂಬವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ ಭುವನೇಶ್ವರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ್ದು, ವಿಚಾರಣಾ ನ್ಯಾಯಾಲಯದ ಆದೇಶ ಸರಿಯಾಗಿದೆ ಎಂದು ತೀರ್ಪು ನೀಡಿತು.
ಪ್ರಾಥಮಿಕ ಪುರಾವೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪಕ್ಷಕಾರರು ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಳ್ಳಬೇಕು. ಅದರ ಹೊರತಾಗಿಯೂ, ಪ್ರಾಥಮಿಕ ಪುರಾವೆಗಳು ಲಭ್ಯವಿಲ್ಲದಿದ್ದರೆ, ದ್ವಿತೀಯ ಸಾಕ್ಷ್ಯವನ್ನು ಹಾಜರುಪಡಿಸಲು ನ್ಯಾಯಾಲಯವು ಅನುಮತಿ ನೀಡಬಹುದು. ಆದರೆ, ಇದಕ್ಕೆ ಪಕ್ಷಕಾರರು ನ್ಯಾಯಾಲಯಕ್ಕೆ ಸೂಕ್ತ ಅರ್ಜಿಯನ್ನು ಸಲ್ಲಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ದ್ವಿತೀಯ ಸಾಕ್ಷ್ಯವನ್ನು ಹಾಜರುಪಡಿಸುವುದಕ್ಕೆ ಮುಂಚಿತವಾಗಿ ಪಕ್ಷಕಾರರು ಅದಕ್ಕೆ ಅಗತ್ಯವಾದ ಬುನಾದಿ ಹಾಕಬೇಕು. ಸಾಮಾನ್ಯವಾಗಿ ಎರಡನೇ ಸಾಕ್ಷ್ಯದ ಹಾಜರಾತಿಗೆ ಮತ್ತು ಅದರ ನಿಶಾನೆಯಾಗಿ ಗುರುತಿಸುವಿಕೆ ಅರ್ಜಿ ಹಾಕಿ ನ್ಯಾಯಾಲಯದ ಅನುಮತಿಯನ್ನು ಪಡೆಯಬೇಕು ಎಂಬುದನ್ನು ನ್ಯಾಯಪೀಠ ಒತ್ತಿ ಹೇಳಿದೆ.
ಪ್ರಕರಣ: ಭುವನೇಶ್ವರಿ Vs ಪ್ರಶಾಂತ್ ಕುಮಾರ್
ಕರ್ನಾಟಕ ಹೈಕೋರ್ಟ್, WP 18433/2023 Dated 15-03-2024