ರಾಜ್ಯಪಾಲರು ಸಂವಿಧಾನಕ್ಕೆ ಬದ್ಧರು; ಮಸೂದೆ ತಡೆಹಿಡಿಯುವುದು ಸಂವಿಧಾನಬಾಹಿರ: ನ್ಯಾ. ಬಿ.ವಿ. ನಾಗರತ್ನಾ
ರಾಜ್ಯಪಾಲರು ಸಂವಿಧಾನಕ್ಕೆ ಬದ್ಧರು; ಮಸೂದೆ ತಡೆಹಿಡಿಯುವುದು ಸಂವಿಧಾನಬಾಹಿರ: ನ್ಯಾ. ಬಿ.ವಿ. ನಾಗರತ್ನಾ
ರಾಜ್ಯಪಾಲರ ಹುದ್ದೆ ಸಂವಿಧಾನ ಹುದ್ದೆ. ಅವರು ಸಂವಿಧಾನಕ್ಕೆ ಬದ್ಧರು. ಶಾಸನ ಸಭೆ ರೂಪಿಸಿದ ಮಸೂದೆ ತಡೆಹಿಡಿಯುವ ಅಧಿಕಾರ ಅವರಿಗಿಲ್ಲ. ಅದು ಸಂವಿಧಾನಬಾಹಿರ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಅಭಿಪ್ರಾಯಪಟ್ಟಿದ್ದಾರೆ.
ಕೇರಳ, ತಮಿಳುನಾಡು, ಪಂಜಾಬ್, ತೆಲಂಗಾಣ, ದೆಹಲಿ ಸೇರಿದಂತೆ ಪ್ರತಿಪಕ್ಷಗಳ ಆಡಳಿತ ಇರುವ ಕಡೆಗಳಲ್ಲಿ ರಾಜ್ಯಪಾಲರು ಹದ್ದುಮೀರಿ ವರ್ತಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆ.. ಮಹಾರಾಷ್ಟ್ರದ ವಿಧಾನಸಭೆಯ ಪ್ರಕರಣವನ್ನೂ ಉಲ್ಲೇಖಿಸಿದ ಅವರು, ಸಾಕಷ್ಟು ಪುರಾವೆಗಳ ಕೊರತೆಯ ನಡುವೆಯೂ ರಾಜ್ಯಪಾಲರು ಸದನದ ಬಲಾಬಲ ಪರೀಕ್ಷೆಗೆ ಸೂಚಿಸಿರುವುದು ಅತಿಕ್ರಮಣದ ಮತ್ತೊಂದು ನಿದರ್ಶನ ಎಂದು ಆತಂಕ ವ್ಯಕ್ತಪಡಿಸಿದರು.
ತಮಿಳುನಾಡಿನ ಡಿಎಂಕೆ ನಾಯಕ ಕೆ. ಪೊನ್ಮುಡಿ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡುವುದನ್ನು ನಿರಾಕರಿಸಿದ ತಮಿಳುನಾಡಿನ ರಾಜ್ಯಪಾಲ ಆರ್. ಎನ್. ರವಿ ಅವರ ನಡವಳಿಕೆ ಕುರಿತು ಸುಪ್ರೀಂ ಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿ ಛೀಮಾರಿ ಹಾಕಿರುವುದನ್ನು ಸ್ಮರಿಸಿದ ಅವರು, ಕೆಲವು ದಿನಗಳ ಹಿಂದೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಗಂಭೀರ ಕಳವಳ ವ್ಯಕ್ತಪಡಿಸಿರುವುದನ್ನು ಪ್ರಸ್ತಾಪಿಸಿದರು.
ರಾಜ್ಯಪಾಲರುಗಳು ಸಂವಿಧಾನಿಕ ನ್ಯಾಯಾಲಯಗಳಲ್ಲಿ ಹೂಡಲಾಗುವ ದಾವೆಗಳ ಕೇಂದ್ರ ಬಿಂದುವಾಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆಯಾಗಿದೆ. ಅವರು ಸಂವಿಧಾನಿಕ ಹುದ್ದೆಗೆ ಶೋಭೆ ತರಬೇಕು. ಪ್ರಜಾಪ್ರಭುತ್ವಕ್ಕೆ ಅಪಚಾರವಾಗುವಂತಿರಬಾರದು ಎಂದು ನ್ಯಾ. ಬಿ.ವಿ. ನಾಗರತ್ನಾ ಮಾರ್ಮಿಕವಾಗಿ ನುಡಿದರು.
ತಾವು ಏನು ಮಾಡಬೇಕು, ಏನು ಮಾಡಬಾರದು ಎಂದು ಹೇಳಿಸಿಕೊಳ್ಳುವ ಬದಲು ಸಂವಿಧಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ರಾಜ್ಯಪಾಲರುಗಳಿಗೆ ಕಿವಿಮಾತು ಹೇಳಿದರು.