ರಾಜ್ಯಪಾಲರು ಸುಪ್ರೀಂ ಆದೇಶ ಧಿಕ್ಕರಿಸಿದ್ದಾರೆ, ಅವರು ಆದೇಶ ಜಾರಿಗೆ ತರಲೇಬೇಕು: ತ.ನಾಡು ರಾಜ್ಯಪಾಲರ ವಿರುದ್ಧ ಸುಪ್ರೀಂ ಕೆಂಡಾಮಂಡಲ
ಸುಪ್ರೀಂ ತೀರ್ಪನ್ನೇ ಧಿಕ್ಕರಿಸಿದ ತ.ನಾಡು ರಾಜ್ಯಪಾಲ ಆರ್.ಎನ್. ರವಿ ವಿರುದ್ಧ ನ್ಯಾಯಪೀಠ ಕೆಂಡಾಮಂಡಲ
ಸುಪ್ರೀಂ ಕೋರ್ಟ್ ತೀರ್ಪನ್ನೇ ಧಿಕ್ಕರಿಸಿದ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ವಿರುದ್ಧ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿದ್ದ ಐವರು ಸದಸ್ಯರ ನ್ಯಾಯಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಜೆ.ಬಿ. ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ, ತಮಿಳುನಾಡು ರಾಜ್ಯಪಾಲರ ಧೋರಣೆಯನ್ನು ಕಠಿಣ ಶಬ್ಧಗಳಲ್ಲಿ ಖಂಡಿಸಿತು.
ದ್ರಾವಿಡ ಮುನ್ನೇತ್ರ ಕಳಗಂ(DMK) ಮುಖಂಡ ಕೆ. ಪೊನ್ಮುಡಿ ಅವರಿಗೆ ಕ್ರಿಮಿನಲ್ ಕೇಸ್‌ನಲ್ಲಿ ವಿಧಿಸಲಾಗಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು.
ಈ ತಡೆಯಾಜ್ಞೆ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ ಆರೋಪಿ ಶಾಸಕ ಪೊನ್ಮುಡಿ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ನಿರಾಕರಿಸಿದ್ದರು. ರವಿ ನಡವಳಿಕೆಯ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯಪಾಲರ ನಡವಳಿಕೆ ಬಗ್ಗೆ ನಾವು ಗಂಭೀರವಾದ ಕಳವಳ ಹೊಂದಿದ್ದೇವೆ. ಅವರು ಭಾರತದ ಸರ್ವೋಚ್ಚ ನ್ಯಾಯಾಲಯವನ್ನು ಧಿಕ್ಕರಿಸುತ್ತಿದ್ಧಾರೆ. ಶಿಕ್ಷೆಯನ್ನು ತಡೆ ಹಿಡಿದಿರುವಾಗ ರಾಜ್ಯಪಾಲರಿಗೆ ಅದಕ್ಕೆ ವ್ಯತಿರಿಕ್ತವಾಗಿ ಹೇಳುವುದು ಏನೂ ಇರುವುದಿಲ್ಲ. ನಮ್ಮ ಆದೇಶವನ್ನು ಜಾರಿಗೆ ತರಬೇಕು ಎಂದು ನ್ಯಾಯಪೀಠ ತಾಕೀತು ಮಾಡಿತು.
ಸಾಂವಿಧಾನಿಕ ಅಧಿಕಾರಿಯೊಬ್ಬರು ಈ ರೀತಿ ವರ್ತಿಸಬಹುದೇ ಎಂದು ಪ್ರಶ್ನಿಸಿದ ನ್ಯಾಯಪೀಠ, ರಾಜ್ಯಪಾಲರು ಎಂದರೆ ಚುನಾಯಿತ ಸರ್ಕಾರದ ನಿರ್ಧಾರಗಳನ್ನು ಕಾರ್ಯಗತಗೊಳಿಸುವ ನಾಮಮಾತ್ರದ ಮುಖ್ಯಸ್ಥರು ಮಾತ್ರ ಎಂಬುದನ್ನು ನೆನಪಿಸಿತು.
ರಾಜ್ಯಪಾಲ ರವಿ ಅವರ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ, ನೀವು ಏನು ಮಾಡುತ್ತಿದ್ದೀರಿ? ಶಿಕ್ಷೆಯನ್ನುಸುಪ್ರೀಂ ಕೋರ್ಟ್ ತಡೆಹಿಡಿದಿದೆ. ರಾಜ್ಯಪಾಲರು ಪ್ರಮಾಣವಚನ ಸ್ವೀಕರಿಸಲಾಗದು ಎಂದು ಹೇಳುತ್ತಾರೆಯೇ..? ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರನ್ನು ಉದ್ದೇಶಿಸಿ ರಾಜ್ಯಪಾಲರಿಗೆ ಮಾತಿನ ಛಾಟಿಯೇಟು ನೀಡಿತು.