ವಕೀಲರ ಅಮಾನತು: ನಿಯಮ ತಿದ್ದುಪಡಿಗೆ ಕರ್ನಾಟಕ ಹೈಕೋರ್ಟ್ ಪ್ರಸ್ತಾಪ
ವಕೀಲರ ಅಮಾನತು: ನಿಯಮ ತಿದ್ದುಪಡಿಗೆ ಕರ್ನಾಟಕ ಹೈಕೋರ್ಟ್ ಪ್ರಸ್ತಾಪ
ಕೋರ್ಟ್ ಕಲಾಪ ಬಹಿಷ್ಕರಿಸುವ ಅಥವಾ ಮುಷ್ಕರ ನಡೆಸುವ ವಕೀಲರ ನಡೆಯನ್ನು ನ್ಯಾಯದಾನದಲ್ಲಿ ಹಸ್ತಕ್ಷೇಪ ಎಂದು ಪರಿಗಣಿಸಿ ಅಂತಹ ವಕೀಲರನ್ನು ಅಮಾನತುಗೊಳಿಸುವ ಕುರಿತು ಕಾನೂನು ತಿದ್ದುಪಡಿ ತರುವ ಪ್ರಸ್ತಾಪಕ್ಕೆ ಕರ್ನಾಟಕ ಹೈಕೋರ್ಟ್ ಮುಂದಾಗಿದೆ.
ಈ ಬಗ್ಗೆ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳ ತಿದ್ದುಪಡಿ ನಿಯಮ-2024ರ ಕರಡು ನಿಯಮಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ಪ್ರಕಾರ, ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ವಕಾಲತ್ತು ನಡೆಸುವ ವಕೀಲರು ನಿಯಮಗಳಲ್ಲಿ ಇರುವ ಷರತ್ತಿಗೆ ಒಳಪಟ್ಟು ತಮ್ಮ ವೃತ್ತಿಯನ್ನು ನಿರ್ವಹಿಸಬೇಕಾಗಿದೆ.
ಕರಡು ನಿಯಮಗಳ ಪ್ರಕಾರ, ಯಾವುದೇ ವಕೀಲರು ತಮ್ಮ ಯಾವುದೇ ಸಮಸ್ಯೆ ಯಾ ದೂರುಗಳನ್ನು ಸ್ಥಳೀಯ ವಕೀಲರ ಸಂಘಗಳ ಮೂಲಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ದೂರು ಇತ್ಯರ್ಥ ಸಮಿತಿ(GRC)ಗೆ ಸಲ್ಲಿಸಬೇಕು.
ಜಿಆರ್‌ಸಿ ವಕೀಲರ ಸಮಸ್ಯೆ, ದೂರುಗಳ ಬಗ್ಗೆ ಅಥವಾ ಮುಷ್ಕರ, ಇಲ್ಲವೇ ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಪ್ರತಿನಿಧಿಗಳ ಜೊತೆಗೆ ಸಮಾಲೋಚನೆ ನಡೆಸುತ್ತದೆ. ಮಾಡಲು ಉದ್ದೇಶಿಸಿರುವ ಮುಷ್ಕರ, ಯಾ ಪ್ರತಿಭಟನೆ ಯಾ ಬಹಿಷ್ಕಾರದ ನಿರ್ಧಾರವು ನ್ಯಾಯದಾನದಲ್ಲಿ ಹಸ್ತಕ್ಷೇಪ ಮಾಢಿದಂತಾಗುತ್ತದೆ ಎಂಬುದರ ಕುರಿತು ಮನವರಿಗೆ ಮಾಡಿಕೊಡುತ್ತದೆ. ಹಾಗೂ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ.
ಒಂದು ವೇಳೆ, ವಕೀಲರ ಸಂಘಗಳು ಜಿಆರ್‌ಸಿ ಸಲಹೆಯನ್ನು ಧಿಕ್ಕರಿಸಿದರೆ, ಆಗ ಜಿಆರ್‌ಸಿ ಅಂತಹ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಸಹಿತ ಇನ್ನಿತರ ಕ್ರಮಗಳನ್ನು ಜರುಗಿಸುವ ಕುರಿತು ಮುಖ್ಯ ನ್ಯಾಯಮೂರ್ತಿಗೆ ವರದಿ ಸಲ್ಲಿಸಬಹುದು. ಒಮ್ಮೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಶುರು ಮಾಡಿದರೆ, ಆಗ ಮುಖ್ಯ ನ್ಯಾಯಮೂರ್ತಿಗಳು ಅಂತಹ ವಕೀಲರನ್ನು ನಿರ್ದಿಷ್ಟ ಅವಧಿಗೆ ಅಮಾನತು ಮಾಡಿ ಆದೇಶಿಸಬಹುದು. ವಕೀಲರ ಅಮಾನತು ಆದೇಶವನ್ನು ವಾಪಸ್ ಪಡೆಯುವ ಅಧಿಕಾರವನ್ನೂ ಮುಖ್ಯ ನ್ಯಾಯಮೂರ್ತಿಯವರಿಗೆ ನೀಡಲಾಗಿದೆ.
ಜಿಆರ್‌ಸಿಯು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಅಡ್ವಕೇಟ್ ಜನರಲ್ ಮತ್ತು ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷರು ಮತ್ತು ಹೈಕೋರ್ಟ್ ಆಡಳಿತ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ನ್ಯಾಯಮೂರ್ತಿಗಳು ಮತ್ತು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ.
ವಕೀಲರ ಆತಂಕ: ಸಾಧಕ-ಬಾಧಕ ಚರ್ಚೆಗೆ ಕರೆ
ವಕೀಲರ ನ್ಯಾಯಯುತ ಹೋರಾಟದ ಅಥವಾ ಅನ್ಯಾಯದ ವಿರುದ್ದ ಪ್ರತಿಭಟಿಸುವ ಹಕ್ಕನ್ನು ದಮನ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಹುಬ್ಬಳ್ಳಿಯ ಹಿರಿಯ ವಕೀಲರಾದ ಬಸವರಾಜ ವಿ. ಕೊರಿಮಠ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದ ವಕೀಲ ಬಂಧುಗಳು ಇದರ ಸಾಧಕ-ಭಾಧಕ ಗಳ ಬಗ್ಗೆ ಕೂಡಲೇ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.