ಶೇ. 75ರಷ್ಟು ಅಂಗವೈಕಲ್ಯ ಹೊಂದಿರುವ ವ್ಯಕ್ತಿ ತನ್ನ ಪತ್ನಿಗೆ ಜೀವನಾಂಶ ನೀಡುವಂತೆ ಆದೇಶ ಹೊರಡಿಸಲಾಗದು: ಕರ್ನಾಟಕ ಹೈಕೋರ್ಟ್
ಶೇ. 75ರಷ್ಟು ಅಂಗವೈಕಲ್ಯ ಹೊಂದಿರುವ ವ್ಯಕ್ತಿ ತನ್ನ ಪತ್ನಿಗೆ ಜೀವನಾಂಶ ನೀಡುವಂತೆ ಆದೇಶ ಹೊರಡಿಸಲಾಗದು: ಕರ್ನಾಟಕ ಹೈಕೋರ್ಟ್
ಶೇಕಡಾ 75ರಷ್ಟು ಅಂಗವೈಕಲ್ಯ ಹೊಂದಿರುವ ವ್ಯಕ್ತಿ ತನ್ನ ವಿಚ್ಚೇದಿತ ಪತ್ನಿಗೆ ಜೀವನಾಂಶ ಪಾವತಿಸುವಂತೆ ಆದೇಶ ಹೊರಡಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಪಾರ್ಶ್ವವಾಯುವಿಗೆ ತುತ್ತಾಗಿ ಶೇ. 75ರಷ್ಟು ಅಂಗವೈಕಲ್ಯದಿಂದ ಬಳಲುತ್ತಿರುವ ವ್ಯಕ್ತಿಯು ತನ್ನ ವಿಚ್ಚೇದಿತ ಪತ್ನಿಗೆ ಜೀವನಾಂಶ ಮೊತ್ತವನ್ನು ಹೆಚ್ಚಿಸುವಂತೆ ಆದೇಶಿಸಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿದೆ. ಹಾಗೂ ವಿಚಾರಣಾ ನ್ಯಾಯಾಲಯ ನೀಡಿದ ಆದೇಶವನ್ನು ರದ್ದುಗೊಳಿಸಿದೆ.
ಪ್ರತಿವಾದಿ ಪತಿಯು ಊರುಗೋಲಿನ ನೆರವಿನಿಂದ ನಡೆದಾಡುತ್ತಿದ್ದಾರೆ. ಅವರು ಉದ್ಯೋಗ ಅರಸಲು ಅಸಹಾಯಕರಾಗಿದ್ದಾರೆ. ಹೀಗಾಗಿ, ಜೀವನಾಂಶ ನೀಡುವಂತೆ ನಿರ್ದೇಶನ ನೀಡಲು ಆದೇಶ ಹೊರಡಿಸಲಾಗದು ಎಂದು ನ್ಯಾಯಪೀಠ ಹೇಳಿದೆ.
ಇದೇ ವೇಳೆ, ಪತ್ನಿ ದುಡಿಯಲು ಶಕ್ತಳಾಗಿದ್ದು, ಉದ್ಯೋಗ ಮಾಡಲು ಅರ್ಹತೆ ಹೊಂದಿದ್ದಾರೆ ಎಂಬುದನ್ನು ನ್ಯಾಯಪೀಠ ಗಮನಿಸಿತು. ತದ ನಂತರ, ಪತಿಗೆ ನೀಡಿದ್ದ ಅಂಗವೈಕಲ್ಯ ಪ್ರಮಾಣಪತ್ರವನ್ನು ಉಲ್ಲೇಖಿಸಿ ಅಂಗವೈಕಲ್ಯದಿಂದ ಪತಿ ಆರ್ಥಿಕವಾಗಿ ದುರ್ಬಲನಾಗಿದ್ದು, ಉದ್ಯೋಗ ಮಾಡಲು ಅಸಮರ್ಥನಾಗಿದ್ದರೂ ಜೀವನಾಂಶ ಪಾವತಿಸುವಂತೆ ಕೇಳಲು ಪತ್ನಿ ಹೇಗೆ ಒತ್ತಾಯಿಸುತ್ತಾರೆ, ಇದಕ್ಕೆ ಯಾವ ಸಮರ್ಥನೆ ಇದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಜೀವನಾಂಶ ನಿರ್ಧರಿಸುವ ವೇಳೆ, ಎಲ್ಲ ಅಂಶಗಳನ್ನು ನ್ಯಾಯಪೀಠ ಸೂಕ್ಷ್ಮವಾಗಿ ಗಮನಿಸಬೇಕು. ಸದ್ರಿ ಪ್ರಕರಣದಲ್ಲಿ, ಪತಿ ಹೆಂಡತಿ ಮತ್ತು ಮಗುವನ್ನು ಸಂರಕ್ಷಿಸಲು ಪೋಷಿಸಲು ಸಮರ್ಥ ವ್ಯಕ್ತಿಯೇ ಎಂಬುದು ಪ್ರಾಥಮಿಕ ವಿಚಾರ. ಪತಿ ಆರೋಗ್ಯ ಸ್ಥಿತಿ ಸರಿ ಇಲ್ಲದಿರುವುದರಿಂದ ಮುಂದೆ ಉದ್ಯೋಗ ಹುಡುಕಲು ಮತ್ತು ಪತ್ನಿ-ಮಕ್ಕಳಿಗೆ ಜೀವನಾಂಶ ಪಾವತಿಸಲು ಶಕ್ತನಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.