2ನೇ ಪತ್ನಿಯ ಮಕ್ಕಳು, ಅನೂರ್ಜಿತ ಸಂಬಂಧದ ಮಕ್ಕಳು ಕೂಡ ಅನುಕಂಪದ ಉದ್ಯೋಗಕ್ಕೆ ಅರ್ಹರು: ಕರ್ನಾಟಕ ಹೈಕೋರ್ಟ್
2ನೇ ಪತ್ನಿಯ ಮಕ್ಕಳು, ಅನೂರ್ಜಿತ ಸಂಬಂಧದ ಮಕ್ಕಳು ಕೂಡ ಅನುಕಂಪದ ಉದ್ಯೋಗಕ್ಕೆ ಅರ್ಹರು: ಕರ್ನಾಟಕ ಹೈಕೋರ್ಟ್
ಎರಡನೇ ಪತ್ನಿಯ ಮಕ್ಕಳು ಅಥವಾ ಅನೂರ್ಜಿತ ವಿವಾಹದ ಮಕ್ಕಳು ಕೂಡ ಅನುಕಂಪದ ಉದ್ಯೋಗಕ್ಕೆ ಅರ್ಹರು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಅನುಕಂಪದ ನೌಕರಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಚಿತ್ರದುರ್ಗ ನಗರಸಭೆ ಆಯುಕ್ತರ ಆದೇಶವನ್ನು ಪ್ರಶ್ನಿಸಿ ಭರತ್ ಕುಮಾರ್ ಎಂಬವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸಚಿನ್ ಶಂಕರ್ ಮಗ್ದೂಮ್ ಅವರಿದ್ದ ನ್ಯಾಯಪೀಠ ಈ ತೀರ್ಪನ್ನು ಪ್ರಕಟಿಸಿದೆ.
ತಮ್ಮ ಪೋಷಕರು ಯಾರಾಗಬೇಕು ಎಂದು ಮಕ್ಕಳು ಆಯ್ಕೆ ಮಾಡಿರುವುದಿಲ್ಲ. ಹಾಗಾಗಿ, ಮೊದಲ ಪತ್ನಿಯ ಮಕ್ಕಳಂತೆಯೇ ಎರಡನೇ ಮಕ್ಕಳು ಕೂಡಾ ಕಾನೂನಾತ್ಮಕ ವಾರಿಸುದಾರರೇ ಆಗಿರುತ್ತಾರೆ. ಎರಡನೇ ವಿವಾಹ ಹಾಗೂ ಅನೂರ್ಜಿತ ವಿವಾಹಕ್ಕೆ ಜನಿಸಿದ ಮಕ್ಕಳೂ ಇಂತಹ ಅನುಕಂಪದ ನೌಕರಿಗೆ ಅರ್ಹರಲ್ಲ ಎನ್ನುವುದು ಅಥವಾ ದ್ವಿಪತ್ನಿತ್ವ ನಿಯಂತ್ರಿಸುವ ಉದ್ದೇಶದಿಂದ ಎರಡನೇ ಹೆಂಡತಿಯ ಮಕ್ಕಳಿಗೆ ಅನುಕಂಪದ ನೌಕರಿ ನಿರಾಕರಿಸುತ್ತೇವೆ ಎನ್ನುವುದು ಒಪ್ಪಲಾಗದು ಎಂದು ಹೈಕೋರ್ಟ್ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಇಂತಹ ನಿರ್ಧಾರವು ಎರಡನೇ ಪತ್ನಿ ಅಥವಾ ಅನೂರ್ಜಿತ ವಿವಾಹದ ಮಕ್ಕಳ ಘನತೆಯ ಬದುಕಿಗೆ ಅಪಚಾರ ಮಾಡಿದಂತೆ. ಅದೇ ರೀತಿ, ಸಂವಿಧಾನದ ಆಶಯಕ್ಕೆ ವಿರುದ್ಧವಾದದ್ದು ಎಂದು ಈಗಾಗಲೇ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಹೇಳಿದೆ. ಯೂನಿಯನ್ ಆಫ್ ಇಂಡಿಯಾ Vs ವಿ.ಆರ್. ತ್ರಿಪಾಠಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಆಧಾರದಲ್ಲಿ ಈ ಹಿಂದೆ ಹೈಕೋರ್ಟ್ ವಿಭಾಗೀಯ ಪೀಠ ಈ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂದು ನ್ಯಾ. ಸಚಿನ್ ಶಂಕರ್ ಮಗ್ದೂಮ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಸ್ತುತ ಪ್ರಕರಣದ ಅರ್ಜಿದಾರರಿಗೆ ಎರಡನೇ ಹೆಂಡತಿಯ ಮಗ ಎಂಬ ಕಾರಣ ನೀಡಿ ಚಿತ್ರದುರ್ಗ ನಗರಸಭೆ ಆಯುಕ್ತರು ಅನುಕಂಪದ ನೌಕರಿ ನಿರಾಕರಿಸಿರುವುದು ಕಾನೂನು ಬಾಹಿರ. ಹಾಗಾಗಿ, ಅನುಕಂಪದ ಉದ್ಯೋಗ ನಿರಾಕರಿಸಿ ಚಿತ್ರದುರ್ಗ ನಗರಸಭೆ ಆಯುಕ್ತರು ನೀಡಿರುವ ಹಿಂಬರವನ್ನು ರದ್ದುಪಡಿಸಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಅರ್ಜಿದಾರರು ನೀಡಿರುವ ಅರ್ಜಿಯನ್ನು ಕಾನೂನು ರೀತ್ಯಾ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಪ್ರಕರಣ: ಭರತ್ ಕುಮಾರ್ Vs ಆಯುಕ್ತರು, ಚಿತ್ರದುರ್ಗ ನಗರಸಭೆ
ಕರ್ನಾಟಕ ಹೈಕೋರ್ಟ್, WP 387/2024