ಚುನಾವಣಾ ತಕರಾರು ಅರ್ಜಿಗಳು ನಕಲು ಮಾಡುವ ಅರ್ಜಿಗಳಲ್ಲ, ಅದನ್ನು ರೂಪಿಸಲು ಗಂಭೀರ ಅಧ್ಯಯನ ಬೇಕು- ಪ್ರೊ. ರವಿವರ್ಮ ಕುಮಾರ್
ಚುನಾವಣಾ ತಕರಾರು ಅರ್ಜಿಗಳು ನಕಲು ಮಾಡುವ ಅರ್ಜಿಗಳಲ್ಲ, ಅದನ್ನು ರೂಪಿಸಲು ಗಂಭೀರ ಅಧ್ಯಯನ ಬೇಕು- ಪ್ರೊ. ರವಿವರ್ಮ ಕುಮಾರ್
ಚುನಾವಣಾ ತಕರಾರು ಅರ್ಜಿಗಳು ಗಂಭೀರ ಸ್ವರೂಪದ್ದು. ಅವುಗಳನ್ನು ನಕಲು ಮಾಡಿ ನ್ಯಾಯಾಲಯದ ಮುಂದೆ ಹಾಕಲಾಗುವುದಿಲ್ಲ. ಚುನಾವಣಾ ತಕರಾರರು ಅರ್ಜಿಗಳನ್ನು ರೂಪಿಸಲು ಗಂಭೀರ ಅಧ್ಯಯನ ಬೇಕು ಎಂದು ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ವಾದಿಸಿದ್ದಾರೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಅವರ ವಿರುದ್ಧ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಅವರು ಈ ವಾದ ಮಂಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಅವರ ವಿರುದ್ಧ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ರಿಜ್ವಾನ್ ಅರ್ಷದ್, ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸಲ್ಲಿಸಿರುವ ಅರ್ಜಿಯಿಂದ ಸಂಪೂರ್ಣವಾಗಿ ನಕಲು ಮಾಡಿ ಹಾಕಲಾಗಿದೆ ಎಂದು ಅವರು ಸ್ಪಷ್ಟ ಶಬ್ಧಗಳಲ್ಲಿ ಹೇಳಿದ್ದಾರೆ.
ನಕಲು ಎಂದರೆ ಪೂರ್ಣ ನಕಲು. ಆ ಅರ್ಜಿಯಲ್ಲಿ ಇದ್ದ ಅಲ್ಪ ವಿರಾಮ, ಪೂರ್ಣ ವಿರಾಮ ಮತ್ತು ವ್ಯಾಕರಣ ದೋಷಗಳೂ ಈ ಅರ್ಜಿಯಲ್ಲಿ ಯಥಾವತ್ತಾಗಿ ಇದೆ. ಇದಕ್ಕಾಗಿ ಅರ್ಜಿದಾರರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಹೇಳಿದ್ದಾರೆ.
ಪ್ರಜಾ ಪ್ರತಿನಿಧಿ ಕಾಯ್ದೆಯಲ್ಲಿ ಪಕ್ಷ ಮತ್ತು ಅಭ್ಯರ್ಥಿಯನ್ನು ಪ್ರತ್ಯೇಕಿಸಲಾಗಿದೆ. ಪಕ್ಷದ ಘೋಷಣೆಗಳನ್ನು ಅಭ್ಯರ್ಥಿ ಘೋಷಣೆಗಳನ್ನಾಗಿ ಪರಿಗಣಿಸಲಾಗದು ಎಂದು ಅವರು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ರಾಜಕೀಯ ಪಕ್ಷಗಳಿಗೆ ಪ್ರಣಾಳಿಕೆ ಸಿದ್ದಪಡಿಸುವುದಕ್ಕೆ ಅಧಿಕಾರ ಇದೆ ಎಂಬುದನ್ನು ಚುನಾವಣಾ ಆಯೋಗವೇ ಹೇಳಿದೆ. ಚುನಾವಣಾ ಪ್ರಣಾಳಿಕೆ ಭರವಸೆಗಳು ಭ್ರಷ್ಟಾಚಾರದ ಅಡಿಯಲ್ಲಿ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಬಡತನ, ನಿರುದ್ಯೋಗ ನಿವಾರಣೆ ಮಾಡುವುದಕ್ಕೆ ಸರ್ಕಾರ ಮುಂದಾಗಬೇಕು. ಇದಕ್ಕೆ ಸಂವಿಧಾನದಲ್ಲೂ ಅವಕಾಶ ಕಲ್ಪಿಸಲಾಗಿದೆ ಎಂದು ವಕೀಲರು ವಾದ ಮಂಡಿಸಿದರು.