ಪಂಚನಾಮೆ ಆಧಾರದಲ್ಲಿ ಎಫ್‌ಐಆರ್: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಪಂಚನಾಮೆ ಆಧಾರದಲ್ಲಿ ಎಫ್‌ಐಆರ್: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಕೇವಲ ಪಂಚನಾಮೆಯ ಆಧಾರದಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಅಕ್ರಮ ಮದ್ಯ ಸಾಗಾಟ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ದಯಾನಂದ ಮತ್ತು ರವಿ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸದೆ.
ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅರ್ಜಿದಾರರಿಂದ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡು ಪಂಚನಾಮೆ ನಡೆಸಿದ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.
ಇಂತಹ ಪ್ರಕ್ರಿಯೆಗೆ ಕಾನೂನಿನಲ್ಲಿ ಯಾವುದೇ ಅವಕಾಶ ಇಲ್ಲ. ಇಂತಹ ಆರೋಪಗಳು ಎದುರಾದರೆ ಮಾಹಿತಿದಾರರು ಸಹಿ ಹಾಕಿ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಬಹುದು. ಇಲ್ಲವೇ, ನಿಖರ ಮಾಹಿತಿಯ ಆಧಾರದಲ್ಲಿ ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿಕೋಂಡು ಎಫ್‌ಐಆರ್ ದಾಖಲಿಸಿಕೊಳ್ಳುತ್ತಾರೆ. ಈ ಎರಡರಲ್ಲಿಯೂ ಮಾಹಿತಿಯನ್ನು ಮೊದಲು ಲಿಖಿತವಾಗಿ ದಾಖಲಿಸಿಕೊಂಡು ನಂತರ ತನಿಖೆ ನಡೆಸುತ್ತಾರೆ.
ಆದರೆ, ಪ್ರಸ್ತುತ ಪ್ರಕರಣದಲ್ಲಿ ಈ ಪ್ರಕ್ರಿಯೆ ನಡೆದಿಲ್ಲ. ಅದಕ್ಕೆ ಬದಲಾಗಿ ಮದ್ಯವನ್ನು ಸಾಗಾಟ ಮಾಡುತ್ತಿದ್ದವರಿಂದ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡು ಪಂಚನಾಮೆ ನಡೆಸಿದ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಇದು ಕಾನೂನು ಬಾಹಿರ ಕ್ರಮ. ಈ ಅಂಶವನ್ನು ಪರಿಗಣಿಸದೆ ಶಿಕ್ಷೆಯನ್ನು ವಿಧಿಸಿರುವುದು ದೋಷದಿಂದ ಕೂಡಿದೆ ಎಂದು ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ನ್ಯಾಯಪೀಠ ರದ್ದುಪಡಿಸಿದೆ.